ಭೋಪಾಲ್, ಮಾ. 24 (Daijiworld News/MB) : ಬಿಜೆಪಿಯ ಶಿವರಾಜ್ ಸಿಂಗ್ ಚೌಹಾಣ್ ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ್ದು ಅವರು ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದಾರೆ.
ಕಮಲನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರವು 15 ತಿಂಗಳ ಅವಧಿ ಆಡಳಿತ ನಡೆಸಿದ್ದು ಮಧ್ಯಪ್ರದೇಶ ಕಾಂಗ್ರೆಸ್ನ ಪ್ರಭಾವಿ ನಾಯಕರಾಗಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು 22 ಶಾಸಕರು ರಾಜೀನಾಮೆ ನೀಡಿದ ಕಾರಣ, ಸರ್ಕಾರವು ಬಹುಮತ ಕಳೆದುಕೊಂಡಿತ್ತು. 22 ಶಾಸಕರು ನಂತರದ ದಿನಗಳಲ್ಲಿ ಬಿಜೆಪಿ ಸೇರಿದ್ದಾರೆ.
ರಾಜೀನಾಮೆ ನೀಡಿದ ಶಾಸಕರು ಬೆಂಗಳೂರಿನ ಹೋಟೆಲ್ ಒಂದರಲ್ಲಿಯೇ ಉಳಿದುಕೊಂಡು ಅಲ್ಲಿಂದಲೇ ರಾಜೀನಾಮೆ ಸಲ್ಲಿಸಿದ್ದರು.
ಮಧ್ಯಪ್ರದೇಶ ರಾಜ್ಯಪಾಲರು, ಮಾರ್ಚ್ 17ರಂದು ಬಹುಮತ ಸಾಬೀತು ಮಾಡುವಂತೆ ಕಮಲನಾಥ್ ಅವರಿಗೆ ಸೂಚಿಸಿದ್ದರು. ಆದರೆ, ಕೊರೊನಾ ವೈರಸ್ ಕಾರಣ ಸ್ಪೀಕರ್ ಅವರು ಸದನವನ್ನು ಮುಂದೂಡಿದ್ದರು. ಇದರ ವಿರುದ್ಧ ಬಿಜೆಪಿ ಸುಪ್ರೀಂ ಕೋರ್ಟ್ಗೆ ಹೋಗಿತ್ತು.
ಮಾರ್ಚ್ 19 ರ ಸಂಜೆ 5ರ ಒಳಗೆ ಬಹುಮತ ಸಾಬೀತು ಮಾಡಿ ಎಂದು ಕಮಲನಾಥ್ ಅವರಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು. ಈ ಗಡುವು ಮುಗಿಯುವ ಮುನ್ನವೇ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.