ಬೆಂಗಳೂರು, ಮಾ. 24 (Daijiworld News/MB) : ನೂಕು ನುಗ್ಗಲು ಆಗುವ ಸಾಧ್ಯತೆ ಇರುವ ಹಿನ್ನಲೆಯಲ್ಲಿ ಇಂದಿರಾ ಕ್ಯಾಂಟೀನ್ಗಳನ್ನು ತೆರೆಯದೇ ಇರಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಿಳಿಸಿದ್ದಾರೆ.
ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ರಾಜ್ಯದ ಜನತೆ ಯುಗಾದಿ ಹಬ್ಬವನ್ನು ತಮ್ಮ ಮನೆಯಲ್ಲೇ ಸರಳವಾಗಿ ಆಚರಿಸಬೇಕು. ಇಂದಿರಾ ಕ್ಯಾಂಟಿನ್ ತೆರೆಯ ಬಾರದು ಎಂದು ತೀರ್ಮಾನಿಸಿದ್ದೇವೆ. ಜನಸಂದಣಿ ಹೆಚ್ಚುವ ಭೀತಿಯಿಂದ ಈ ನಿರ್ಧಾರಕ್ಕೆ ಬಂದಿದ್ದೇವೆ. ಸರ್ಕಾರದೊಂದಿಗೆ ಜನರು ಸಹಕರಿಸಬೇಕು. ನಿಯಮ ಉಲ್ಲಂಘನೆ ಮಾಡಿದರೆ ಪೊಲೀಸರು ಕಠಿಣ ಕ್ರಮ ಜರುಗಿಸಲಿದ್ದಾರೆ. ಇದು ಅನಿವಾರ್ಯವಾಗಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ನಾಗರಿಕರು ಲಾಕ್ಡೌನ್ಗೆ ಸಹಕಾರ ನೀಡಬೇಕು. ಅಗತ್ಯ ವಸ್ತುಗಳ ಖರೀದಿಸಲು ಅವಕಾಶ ಮಾಡಿಕೊಡುತ್ತೇವೆ. ಜನರು ಭಯಪಡಬಾರದು, ಹಾಲು ಮತ್ತು ದಿನಸಿ ಪದಾರ್ಥ ದರ ಹೆಚ್ಚಳ ಮಾಡಿ ಶೋಷಿಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
ಯಾರೂ ಕೂಡಾ 31ರವರೆಗೆ ಮನೆಯಿಂದ ಹೊರ ಬರಬೇಡಿ. ಹೊರ ಬಂದ ಕಾರಣದಿಂದಾಗಿ ಪೊಲೀಸರು ಕ್ರಮ ಕೈಗೊಂಡರೆ ಸರ್ಕಾರವನ್ನು ದೂಷಿಸಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.
ಅಂತಾರಾಷ್ಟ್ರೀಯ ದೇಶೀಯ ವಿಮಾನ ಹಾರಾಟ ನಿಲ್ಲಿಸಲಾಗಿದೆ ಎಂದರೆ ಪರಿಸ್ಥಿತಿಯ ಗಂಭೀರತೆ ಅರ್ಥವಾಗಬೇಕು. ಜನ ಈ ಬಗ್ಗೆ ಅಸಡ್ಡೆ ತೋರದೆ, ಅನಗತ್ಯವಾಗಿ ಕಾರಿನಲ್ಲಿ, ಸ್ವಂತ ವಾಹನದಲ್ಲಿ ಓಡಾಟ ಮಾಡಬಾರದು ಎಂದು ಸಿಎಂ ತಿಳಿಸಿದ್ದಾರೆ.