ಬೆಂಗಳೂರು, ಮಾ. 24 (Daijiworld News/MB) : ಕೊರೊನಾ ಸೋಂಕು ಹರಡದಂತೆ ಲಾಕ್ಡೌನ್ ಮಾಡಲಾಗಿರುವ ಕಾರಣದಿಂದಾಗಿ ನಷ್ಟ ಅನುಭವಿಸುತ್ತಿರುವ ಬಡವರಿಗೆ ನೆರವಾಗಲೆಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಕೊರೊನಾ ವಿಶೇಷ ಪ್ಯಾಕೇಜ್ ಘೋಷಿಸಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ಮಾತನಾಡಿದ ಅವರು, ವಿಶೇಷ ಪ್ಯಾಕೇಜ್ ಘೋಷಿಸಿದ್ದು ಇದರಂತೆ ರಾಜ್ಯದ 21 ಲಕ್ಷ ಕಟ್ಟಡ ಕಾರ್ಮಿಕರಿಗೆ ತಿಂಗಳಿಗೆ ತಲಾ ಒಂದು ಸಾವಿರ ಪರಿಹಾರ ಧನ ನೀಡಲಾಗುವುದು.
ಹಾಗೆಯೇ ಬಡವರ ಬಂಧು ಯೋಜನೆಯ ಸಾಲಮನ್ನಾ, 2 ತಿಂಗಳ ಪಡಿತರ ಮುಂಗಡ ನೀಡಲು ಕ್ರಮ, ಸಾಮಾಜಿಕ ಭದ್ರತಾ ಪಿಂಚಣಿ ಮುಂಗಡ, 2 ತಿಂಗಳ ಮಾನವ ದಿನಗಳ ಬಾಬ್ತು ನೀಡಲಾಗುವುದು ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಇದೀಗ 57 ಕ್ಕೆ ಏರಿಕೆಯಾಗಿದೆ. ಸೋಂಕು ಹಬ್ಬುವಿಕೆ ತಡೆಯುವ ನಿಟ್ಟಿನಲ್ಲಿ ಸರ್ಕಾರ ಮಾರ್ಚ್ 31 ರವರೆಗೆ ರಾಜ್ಯವನ್ನು ಲಾಕ್ಡೌನ್ ಮಾಡಿದೆ.