ಭಟ್ಕಳ, ಮಾ. 24 (Daijiworld News/MSP) : ದುಬೈನಿಂದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದ ಭಟ್ಕಳ ಮೂಲದ ಇಬ್ಬರು ವ್ಯಕ್ತಿಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಒಟ್ಟಾರೆ ಈವರೆಗೆ ಕರ್ನಾಟಕದ ಸೋಂಕಿತರ ಸಂಖ್ಯೆ 37ಕ್ಕೆ ಏರಿಕೆಯಾಗಿದೆ.
ಕೇಂದ್ರ ಸರ್ಕಾರದ ವೆಬ್ಸೈಟ್ ಸ್ಪಷ್ಟಪಡಿಸಿದರೂ ಆದರೆ, ರಾಜ್ಯ ಸರ್ಕಾರದ ಅಧಿಕಾರಿಗಳು ಇದನ್ನು ಇನ್ನೂ ದೃಢಪಡಿಸಿಲ್ಲ. 40 ವರ್ಷದ ವ್ಯಕ್ತಿ ಬಂದ ದಿನವೇ ಪರೀಕ್ಷೆಗೆ ಒಳಗಾಗಿದ್ದರು. ಅವರ ಗಂಟಲು ದ್ರವದ ಪರೀಕ್ಷೆಯಲ್ಲಿ ಸೋಂಕು ಪತ್ತೆಯಾಗಿದೆ ಎಂದು ವೈದ್ಯಾಧಿಕಾರಿಗಳು ದೃಢಪಡಿಸಿದ್ದಾರೆ. ಇನ್ನೋರ್ವ (65) ವರ್ಷದ ವ್ಯಕ್ತಿಯಲ್ಲೂ ಕೊರೋನ ಸೋಂಕು ಪತ್ತೆಯಾಗಿದೆ. ಅವರನ್ನು ಕ್ವಾರಂಟೈನ್ ಮಾಡಲಾಗಿತ್ತು.
ನಿನ್ನೆವರೆಗೂ ಕರ್ನಾಟಕದಲ್ಲಿ ಸೋಂಕಿತರ ಪ್ರಮಾಣ 33ರಷ್ಟಿತ್ತು. ಇಂದು ಒಂದೇ ದಿನ ನಾಲ್ಕು ಮಂದಿಗೆ ಸೋಂಕು ತಗುಲಿರುವುದಾಗಿ ಕೇಂದ್ರ ಸರ್ಕಾರದ ವೆಬ್ಸೈಟ್ ನ ಮೊದಲ ಬುಲೆಟಿನ್ನಲ್ಲಿ ತಿಳಿಸಲಾಗಿದೆ. ಸಂಜೆ ವೇಳೆಗೆ ಮತ್ತಷ್ಟು ಮಂದಿಗೆ ಸೋಂಕು ವ್ಯಾಪಿಸಬಹುದು ಎಂಬ ಭೀತಿ ಕಾಡುತ್ತಿದೆ.
ದುಬೈನಿಂದ ಬಂದಿದ್ದ 46 ವರ್ಷದ ಕೇರಳ ಮೂಲದ ಮೈಸೂರು ನಿವಾಸಿಗೆ, ದುಬೈ ಪ್ರವಾಸ ಮಾಡಿದ 38 ವರ್ಷದ ವ್ಯಕ್ತಿ, ಇಂಗ್ಲೆಂಡ್ ಪ್ರವಾಸ ಮಾಡಿದ 41 ವರ್ಷದ ವ್ಯಕ್ತಿಗೆ, ಸೋಂಕು ಪೀಡಿತ ಪತಿಯ ಜತೆಗಿನ ಸಂಪರ್ಕದಿಂದಾಗಿ 30 ವರ್ಷದ ಮಹಿಳೆ, ಇಂಗ್ಲೆಂಡ್ ಪ್ರವಾಸ ಮಾಡಿದ 24 ವರ್ಷದ ಯುವಕ, ಜರ್ಮನಿ ಪ್ರವಾಸ ಮಾಡಿದ 60 ವರ್ಷದ ವೃದ್ಧ, ಕೇರಳ ಮೂಲದ 22 ವರ್ಷದ ಯುವಕ ದುಬೈ ಪ್ರವಾಸ ಮುಗಿಸಿ ಬಂದ ಬಳಿಕ ಸೋಂಕಿತರಾಗಿರುವುದು ನಿನ್ನೆಯಷ್ಟೇ ದೃಢಪಟ್ಟಿತ್ತು.