ನವದೆಹಲಿ, ಮಾ. 24 (Daijiworld News/MSP) : ಭಾರತದಲ್ಲಿ ಕೊರೊನಾ ವೈರಸ್ ಇದೀಗ ಮಾರಣಾಂತಿಕವಾಗಿ ಹಬ್ಬುತ್ತಿದ್ದು, ಸೌದಿ ಪ್ರವಾಸ ಮುಗಿಸಿ ಮುಂಬೈಗೆ ಆಗಮಿಸಿದ್ದ 65 ವರ್ಷದ ವ್ಯಕ್ತಿಯೊಬ್ಬರು ಸೋಂಕಿನಿಂದ ಸಾವನ್ನಪ್ಪಿರುವುದು ದೃಢಪಟ್ಟಿದೆ. ಹೀಗಾಗಿ ಕಿಲ್ಲರ್ ಕೊರೊನಾ ವೈರಸ್ ಸೋಂಕಿಗೆ ಮೃತಪಟ್ಟವರ ಸಂಖ್ಯೆ 10ಕ್ಕೇರಿದೆ.
ಇಲ್ಲಿಯವರೆಗೆ 10 ಭಾರತೀಯರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಕೊರೊನಾದಿಂದ ಗುಣಮುಖರಾಗಿದ್ದ ಓರ್ವ ಇಟಲಿ ಪ್ರಜೆ ಆ ಬಳಿಕ ಹೃದಯಾಘಾತದಿಂದ ಸಾವಿಗೀಡಾಗಿದ್ದು ಈತನನ್ನು ಕೊರೊನಾ ಸೋಂಕಿನಿಂದ ಮೃತಪಟ್ಟಿರುವ ಸಾಲಿಗೆ ಸೇರಿಸುವುದಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿತ್ತು
ಮುಂಬೈನಲ್ಲಿ ಕೊರೊನಾ ಸೋಂಕು ತಗುಲಿದ್ದ 65 ವರ್ಷದ ವೃದ್ಧ ಕೆಲ ದಿನಗಳ ಹಿಂದಷ್ಟೇ ಸೌದಿ ಅರೇಬಿಯಾ ಪ್ರವಾಸ ಮುಗಿಸಿ ವಾಪಸ್ಸಾಗಿದ್ದರು. ಮುಂಬೈ ಕಸ್ತೂರ ಬಾ ಆಸ್ಪತ್ರೆಗೆ ದಾಖಲಾಗಿದ್ದರು. ಸೋಮವಾರ ಮೃತಪಟ್ಟಿದ್ದ ವೃದ್ಧನಿಗೆ ಕೊರೊನಾ ಸೋಂಕು ತಗುಲಿರುವುದು ಖಚಿತವಾಗಿದೆ.
ಸದ್ಯ ಭಾರತದಲ್ಲಿ ಕೋವಿಡ್-19 ತಗುಲಿರುವ ಸಂಖ್ಯೆ 511ಕ್ಕೇರಿದ್ದು, 12 ಹೊಸ ಪ್ರಕರಣಗಳು ವರದಿಯಾಗಿವೆ.