ನವದೆಹಲಿ, ಮಾ. 24 (Daijiworld News/MSP) : ಕಳೆದ 24 ಗಂಟೆಗಳಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಯಾವುದೇ ಹೊಸ ಕೊರೊನಾ ವೈರಸ್ ಪ್ರಕರಣಗಳು ಬೆಳಕಿಗೆ ಬಂದಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಂಗಳವಾರ ಹೇಳಿದ್ದಾರೆ.
"ಆಶಾದಾಯಕ ಸಂಗತಿ ಎಂದರೆ ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ ಯಾವುದೇ ಹೊಸ ಕೊರೊನಾ ವೈರಸ್ ಪ್ರಕರಣಗಗಳು ಪತ್ತೆಯಾಗಿಲ್ಲ. ಈಗಾಗಲೇ ಸೋಂಕಿತ ಐದು ಮಂದಿ ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದಾರೆ. ಆದರೆ ಸದ್ಯ ಈ ಸಂಗತಿಯಿಂದ ಸಂತೋಷವಾಗುವ ಸಮಯವಲ್ಲ. ಯಾಕೆಂದರೆ ಪರಿಸ್ಥಿತಿ ಕೈಮೀರದಂತೆ ನೋಡಿಕೊಳ್ಳುವುದೇ ನಮ್ಮ ಮುಂದಿರುವ ದೊಡ್ಡ ಸವಾಲು ಇದಕ್ಕಾಗಿ ನಮಗೆಲ್ಲರಿಗೂ ನಿಮ್ಮ ಬೆಂಬಲ ಬೇಕು" ಎಂದು ಅವರು ಟ್ವಿಟರ್ನಲ್ಲಿ ತಿಳಿಸಿದ್ದಾರೆ.
ಭಾರತದಲ್ಲಿ 500 ಮಂದಿಯಲ್ಲಿ ವೈರಸ್ ದೃಢಪಟ್ಟಿದ್ದು, ಇದರಲ್ಲಿ 37 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ವೈರಸ್'ಗೆ ಈವರೆಗೆ 10 ಮಂದಿ ಬಲಿಯಾಗಿದ್ದು, ಸೋಂಕು ಪೀಡಿತ 500 ಮಂದಿಯ ಪೈಕಿ 41 ಮಂದಿ ವಿದೇಶಿ ಪ್ರಜೆಗಳಿದದಾರೆಂದು ತಿಳಿಸಿದೆ. ಈ ನಡುವೆ ದೇಶದ 30 ರಾಜ್ಯಗಳನ್ನು ಸಂಪೂರ್ಣವಾಗಿ ಲಾಕ್ ಡೌನ್ ಮಾಡಲಾಗಿದ್ದು, ಜನರನ್ನು ಮನೆಯಿಂದ ಹೊರಬರದಂತೆ ಆದೇಶಿಸಲಾಗಿದೆ.