ಭೋಪಾಲ್, ಮಾ.24 (DaijiworldNews/PY) : ಮಧ್ಯಪ್ರದೇಶ ವಿಧಾನಸಭಾ ಸ್ಪೀಕರ್ ಎನ್.ಪಿ ಪ್ರಜಾಪತಿ ಅವರು ಬಿಜೆಪಿ ಹಿರಿಯ ಮುಖಂಡ ಶಿವರಾಜ್ ಸಿಂಗ್ ಚೌಹಾಣ್ ಅವರು ರಾಜ್ಯ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ಗಂಟೆಗಳ ಬಳಿಕ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ಸೋಮವಾರ ತಡರಾತ್ರಿ ಡೆಪ್ಯೂಟಿ ಸ್ಪೀಕರ್ ಹಿನಾ ಕಾವ್ರೆ ಅವರಿಗೆ ಸಲ್ಲಿಸಿದ ರಾಜೀನಾಮೆ ಪತ್ರದಲ್ಲಿ ಪ್ರಜಾಪತಿ ಅವರು ರಾಜ್ಯ ವಿಧಾನಸಭೆಯ ಸ್ಪೀಕರ್ ಸ್ಥಾನಕ್ಕೆ ನೈತಿಕ ಆಧಾರದ ಮೇಲೆ ರಾಜೀನಾಮೆ ನೀಡಿರುವುದಾಗಿ ಹೇಳಿದರು.
ಕಮಲ್ ನಾಥ್ ಅವರು ಕಳೆದ ವರ್ಷದ ಜನವರಿಯಲ್ಲಿ ರಾಜ್ಯದ ಮುಖ್ಯಮಂತ್ರಿಯಾದ ಬಳಿಕ ಗೋಟೆಗಾಂವ್ ಕಾಂಗ್ರೆಸ್ ಶಾಸಕ ಪ್ರಜಾಪತಿ ಅವರನ್ನು ಬಿಜೆಪಿಯ ಪ್ರತಿಭಟನೆಯ ಮಧ್ಯೆಯೂ ಸ್ಪೀಕರ್ ಆಗಿ ಆಯ್ಕೆ ಮಾಡಲಾಗಿತ್ತು.
22 ಕಾಂಗ್ರೆಸ್ ಶಾಸಕರ ರಾಜೀನಾಮೆ ಬಳಿಕ ಕಮಲ್ ನಾಥ್ ತಮ್ಮ ಸರ್ಕಾರ ಬಹುಮತ ಕಳೆದುಕೊಂಡಿದ್ದ ಕಾರಣ ಕಳೆದ ವಾರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಸೋಮವಾರ ರಾತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ನಾಲ್ಕನೇ ಅವಧಿಗೆ ಅಧಿಕಾರ ವಹಿಸಿಕೊಂಡಿದ್ದರು.
ರಾತ್ರಿ 9 ಗಂಟೆಗೆ ರಾಜ ಭವನದಲ್ಲಿ ನಡೆದ ಸರಳ ಸಮಾರಂಭವೊಂದರಲ್ಲಿ ರಾಜ್ಯಪಾಲ ಲಾಲ್ ಜಿ ಟಂಡನ್ ಅವರಿಂದ ಪ್ರಮಾಣವಚನ ಸ್ವೀಕರಿಸಿದರು.