ಬೆಂಗಳೂರು, ಮಾ.24 (DaijiworldNews/PY) : "ಬಿಜೆಪಿಯವರಿಗೆ ವಿರೋಧ ಪಕ್ಷಗಳ ಬಗ್ಗೆ ಗೌರವ ಇಲ್ಲ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದ್ದವರು ವಿರೋಧ ಪಕ್ಷದವರ ಮಾತಿಗೆ ಬೆಲೆ ಕೊಡುತ್ತಾರೆ. ಈ ಎಲ್ಲ ವಿಚಾರಗಳನ್ನು ಇಟ್ಟುಕೊಂಡು ಜನಗಳ ಮುಂದೆ ಹೋಗುತ್ತೇವೆ" ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, "ಸರ್ಕಾರವು ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಚರ್ಚಿಸಿದ್ದರೂ ಸದನದಲ್ಲಿ ಮಸೂದೆ ಮಂಡಿಸಲು ಮುಂದಾಗಿದೆ. ಇದು ಯಾವ ಲೆಕ್ಕ. ಪ್ರಜಾಪ್ರಭುತ್ವ ವಿರೋಧಿ, ಭಂಡತನ ಸರ್ಕಾರವಿದು. ನಿರ್ಧಾರ ತೆಗೆದುಕೊಳ್ಳದಂತೆ ನಡೆದುಕೊಳ್ಳುವುದು ಸರ್ಕಾರದ ಕರ್ತವ್ಯ. ಸಭಾಧ್ಯಕ್ಷರು ಸ್ವತಂತ್ರವಾಗಿ ಕೆಲಸ ಮಾಡುತ್ತಿದ್ದಾರಾ ಅಥವಾ ಪಕ್ಷಪಾತಿ ಆಗಿದ್ದಾರಾ ಎನ್ನುವ ಅನುಮಾನ ಬರುತ್ತದೆ. ಹಾಗಾಗಿ ಸದನ ಕಲಾಪ ಬಹಿಷ್ಕರಿಸಿ, ಸಭಾತ್ಯಾಗ ಮಾಡಿದ್ದೇವೆ" ಎಂದು ತಿಳಿಸಿದರು.
"ಸದನ ಮಾ.27-28 ರವರೆಗೆ ನಡೆಯಬೇಕು. ಬಜೆಟ್ ಮೇಲೆ ಚರ್ಚೆ, ಮಸೂದೆಗಳನ್ನು ಅನುಮೋದಿಸುವುದು ಸರ್ಕಾರದ ಇರಾದೆಯಾಗಿತ್ತು. ಬಜೆಟ್ ಮೇಲಿನ ಚರ್ಚೆ ಅಪೂರ್ಣವಾಗಿದೆ. ಜೆಡಿಎಸ್, ಕಾಂಗ್ರೆಸ್ನಲ್ಲಿ ಇನ್ನೂ ಬಹಳಷ್ಟು ಜನ ಮಾತನಾಡುವವರಿದ್ದಾರೆ. ಇಲಾಖೆ ಬೇಡಿಕೆಗಳ ಮೇಲೆ ಚರ್ಚೆ ನಡೆಯಬೇಕಿದೆ. ಹೆಚ್ಚು ಸಮಯವನ್ನು ಸಂವಿಧಾನದ ಚರ್ಚೆಗೆ ಮೀಸಲಿಟ್ಟೆವು. ಅದಲ್ಲದೇ, ಬೇರೆ ಕಲಾಪಗಳೂ ನಡೆದಿವೆ" ಎಂದರು.
"13 ಬಜೆಟ್ ನಡೆದಾಗಲೂ ಪೂರ್ಣವಾಗಿ ಲೇಖಾನುದಾನ ಪಡೆದಿಲ್ಲ. ಜೂನ್ ಅಥವಾ ಜುಲೈನಲ್ಲಿ ಚರ್ಚೆ ನಡೆಸೋಣ, ಜನರ ತೆರಿಗೆ ಹಣ ಸದ್ಬಳಕೆ ಆಗುತ್ತಿದೆಯೇ ಇಲ್ಲವೋ ಚರ್ಚೆ ಆಗಬೇಕು ಎಂದೆವು. ಆದರೆ, ಈ ವಿಚಾರಕ್ಕೆ ಒಪ್ಪದ ಸರ್ಕಾರ ಪೂರ್ಣ ಪ್ರಮಾಣದ ಬಜೆಟ್ ಅನುಮೋದನೆ ಪಡೆಯಬೇಕು ಎಂದು ಮೊಂಡುತನ ಮಾಡುತ್ತಿದ್ದಾರೆ. ಕೊರೊನಾ ವೈರಸ್ ಹಿನ್ನೆಲೆ ಸದನ ಮುಂದೂಡಲೇ ಬೇಕಾದ ಅನಿವಾರ್ಯವಾದ ಸ್ಥಿತಿ ಇದೆ" ಎಂದು ಹೇಳಿದರು.
"ಜನರ ಸಾವು-ನೋವಿನ ಪ್ರಶ್ನೆ, ಮಾರಕ ಕಾಯಿಲೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅವಶ್ಯಕ. ಧನವಿನಿಯೋಗ ಮಸೂದೆ ಅನುಮೋದನೆ ಕೊಡಲು ಸೋಮವಾರವೇ ಸಿದ್ಧ. ಪೂರಕ ಅಂದಾಜುಗಳಿಗೂ ಅನುಮೋದನೆ ಪಡೆದುಕೊಳ್ಳಿ. ಎಲ್ಲ ರೀತಿಯ ಸಹಕಾರ ಕೊಡುತ್ತೇವೆ. ಅನಿರ್ದಿಷ್ಟ ಅವಧಿಗೆ ಮುಂದೂಡಿ ಎಂದಿದ್ದೆವು ಎಂದು ಸಲಹೆ ನೀಡಿದ್ದೆವು" ಎಂದರು.
"ಧನವಿನಯೋಗ ಮಸೂದೆ ಬಿಟ್ಟು ಬೇರೆ ಯಾವುದೇ ಮಸೂದೆಗಳನ್ನು ತರಬೇಡಿ. ಪ್ರಮುಖ ಮಸೂದೆಗಳು ಚರ್ಚೆ ಆಗದೆ ಅನುಮೋದಿಸುವುದು ಸರಿಯಲ್ಲ. ಆದರೆ, ಅಷ್ಟು ಸಮಯಾವಕಾಶವಿಲ್ಲ. ಹಾಗಾಗಿ ಬೇಡ ಎಂದಿದ್ದೆವು. ಪಂಚಾಯತಿಗಳ ಅಧ್ಯಕ್ಷರ ಅವಧಿ ಮೊದಲು 30 ತಿಂಗಳಿತ್ತು. ಪಂಚಾಯತಿ ತಿಳಿದುಕೊಂಡು ಜನರಿಗೆ ಆಡಳಿತ ತಲುಪಿಸಲು ಇಷ್ಟು ಸಮಯ ಸಾಲುವುದಿಲ್ಲ. ಎರಡು ವರ್ಷ ಅವಿಶ್ವಾಸ ನಿರ್ಣಯ ಮಂಡಿಸಬಾರದು ಎಂದು ನಿಯಮ ಇತ್ತು. ಈಗ ಮಸೂದೆ ಮೂಲಕ ಇದನ್ನೆಲ್ಲ ಬದಲಿಸಲು ಹೊರಟಿದ್ದಾರೆ. ಯಾರೂ ಕೇಳಿರಲಿಲ್ಲ. ಮುಂಬರುವ ಚುನಾವಣೆಗಾಗಿ ಇದನ್ನೆಲ್ಲ ಮಾಡುತ್ತಿದ್ದಾರೆ. ನಾವು ಅಧಿಕಾರ ವಿಕೇಂದ್ರೀಕರಣದಲ್ಲಿ ನಂಬಿಕೆ ಇಟ್ಟವರು . ಇಡೀ ಪಂಚಾಯತ್ ರಾಜ್ ವ್ಯವಸ್ಥೆ ದುರ್ಬಲಗೊಳಿಸಲು ಹೊರಡಿದ್ದಾರೆ. ಇದಕ್ಕೆ ನಮ್ಮ ವಿರೋಧವಿದೆ" ಎಂದರು.
"ಬಿಜೆಪಿಯವರಿಗೆ ಅಧಿಕಾರ ವಿಕೇಂದ್ರೀಕರಣದಲ್ಲಿ ನಂಬಿಕೆಯಿಲ್ಲ. ಸರ್ವಾಧಿಕಾರದಲ್ಲಿ ನಂಬಿಕೆ ಇಟ್ಟವರು" ಎಂದು ಹೇಳಿದರು.
"ಹಬ್ಬ ಇದೆ. ಜನ ಹಬ್ಬ ಮಾಡಬೇಕಿದೆ. ವ್ಯಾಪಾರ ಮಾಡಲಿ. ಅದಕ್ಕಾಗಿ ಲಾಠಿ ಪ್ರಹಾರ ಬೇಡ. ಸರ್ಕಾರ ಕೊರೊನಾ ತಡೆಯುವಲ್ಲಿ ವಿಫಲವಾಗಿದೆ. ಆರೋಗ್ಯ ಸಚಿವರಿಗೂ ವೈದ್ಯಕೀಯ ಶಿಕ್ಷಣ ಸಚಿವರ ಮಧ್ಯೆ ಸಮನ್ವಯತೆ ಇಲ್ಲ. ರಾಜ್ಯ ಸರ್ಕಾರವೇ ಮುಂದಾಗುವುದಕ್ಕೆಲ್ಲ ಹೊಣೆ. ರಾಜ್ಯ ಆರ್ಥಿಕವಾಗಿ ದಿವಾಳಿಯಾಗಿದೆ. ಬಹುಮತ ಇಲ್ಲದ ಅನೈತಿಕ ಸರ್ಕಾರ. ರಾಜ್ಯದ ಜನ ಇವರನ್ನು ನಂಬಿ 25 ಸಂಸದರನ್ನು ಗೆಲ್ಲಿಸಿಕೊಟ್ಟರು. 15ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ಸಂಸದರು ಇಂತಹ ಕೆಟ್ಟ ಪರಿಸ್ಥಿತಿಯಲ್ಲಿ ಬಾಯಿ ಮುಚ್ಚಿಕೊಂಡು ಕುಳಿತಿದ್ದಾರೆ. ಅಧಿಕಾರಕ್ಕೆ ರಾಜ್ಯ ಹಾಳು ಮಾಡಲೆಂದೇ ಬಂದಿದ್ದಾರೆ. ಮೂರು ವರ್ಷದಲ್ಲಿ ಕರ್ನಾಟಕವು 20 ವರ್ಷ ಹಿಂದಕ್ಕೆ ಹೋಗಲಿದೆ" ಎಂದರು.