ಬೆಂಗಳೂರು, ಮಾ.24 (DaijiworldNews/PY) : ಕೊರೊನಾ ಸೋಂಕು ಹರಡುವಿಕೆ ಹಾಗೂ ನಿಯಂತ್ರಣದ ನಿಟ್ಟಿನಲ್ಲಿ ಕೊರೊನಾ ವೈರಸ್ ಉಸ್ತುವಾರಿಯನ್ನು ರಾಜ್ಯಪಾಲ ವಜುಭಾಯಿ ವಾಲಾ ಅವರು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರಿಗೆ ವಹಿಸಿ ಆದೇಶ ಹೊರಡಿಸಿದ್ದಾರೆ.
ಆರೋಗ್ಯ ಇಲಾಖೆ ವ್ಯಾಪ್ತಿಯಲ್ಲಿ ಕೊರೊನಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ನಿಭಾವಣೆ ಹಾಗೂ ನಿಯಂತ್ರಣದ ಹೊಣೆ ಇರುವುದು ಸಾಮಾನ್ಯ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರಿಗಿದ್ದ ಜವಾಬ್ದಾರಿಯನ್ನು ಹಿಂಪಡೆದು, ಈ ಹೊಣೆಯನ್ನು ಸುಧಾಕರ್ ಅವರಿಗೆ ನೀಡುವಂತೆ ರಾಜ್ಯಪಾಲರಿಗೆ ಶಿಫಾರಸು ಮಾಡಿದ್ದರು. ಮಂಗಳವಾರ ಇದರ ಅನ್ವಯ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.
ರಾಜ್ಯಕ್ಕೆ ಕೊರೊನಾ ಸೋಂಕು ಕಾಲಿಟ್ಟ ಸಮಯದಲ್ಲಿ ಶ್ರೀರಾಮುಲು ಅವರು ತಮ್ಮ ಮಗಳ ವಿವಾಹ ಕಾರ್ಯಕ್ರಮದಲ್ಲಿ ಸಕ್ರಿಯರಾಗಿದ್ದರು. ಈ ಸಂದರ್ಭ ಸುಧಾಕರ್ ಅವರೇ ಕೊರೊನಾ ಸೋಂಕು ನಿಯಂತ್ರಣ ತಡೆಗೆ ಸಂಬಂಧ ಪಟ್ಟ ಕಾರ್ಯಗಳ ಮೇಲುಸ್ತುವಾರಿ ವಹಿಸಿದ್ದರು. ಮಾಧ್ಯಮಗಳಿಗೆ ಕೊರೊನಾ ಸೋಂಕು ನಿಯಂತ್ರಣ ಕುರಿತು ಮಾಹಿತಿ ನೀಡುವ ಸಂದರ್ಭದಲ್ಲೂ ಸಿದ್ದತೆ ಇಲ್ಲದೇ ಬರುತ್ತಿದ್ದ ಶ್ರೀರಾಮುಲು ಅವರು ತಪ್ಪು ಮಾಹಿತಿ ನೀಡಿ , ಗೊಂದಲ ಮೂಡಿಸಿದ ಪ್ರಕರಣಗಳು ಆಗಿದ್ದವು.
ಕೊರೊನಾ ಸೋಂಕಿತರ ಸಂಖ್ಯೆ ಸೋಮವಾರದಿಂದ 33ಕ್ಕೆ ಏರಿಕೆಯಾಗಿದ್ದು, ಈ ಸಂಖಯೆಯನ್ನು ಶ್ರೀರಾಮುಲು ಅವರು 27 ಎಂದು ಹೇಳಿದ್ದರು. ವಿಧಾನಸಭೆ ಹಾಗೂ ವಿಧಾನಪರಿತ್ತಿನಲ್ಲಿ ಸರ್ಕಾರ ಇದರಿಂದಾಗಿ ಮುಜುಗರಕ್ಕೀಡಾಬೇಕಾದ ಪರಿಸ್ಥಿತಿ ಎದುರಾಗಿತ್ತು. ಹಾಗಾಗಿ ಶ್ರೀರಾಮುಲು ಅವರಿಗಿದ್ದ ಹೊಣೆಯನ್ನು ಸುಧಾಕರ್ ಅವರು ಚೆನ್ನಾಗಿ ವಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.