ನವದೆಹಲಿ, ಮಾ 24 (DaijiworldNews/SM): "ಮಾರ್ಚ್ 24ರ ರಾತ್ರಿ 12 ಗಂಟೆಯಿಂದ ದೇಶದೆಲ್ಲೆಡೆ ಲಾಕ್ ಡೌನ್" ಮಾಡಿ ಪ್ರಧಾನಿ ನರೇಂದ್ರ ಮೋದಿ ಆದೇಶ ನೀಡಿದ್ದಾರೆ. ಮನೆಯಿಂದ ಹೊರಬರುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ. ಒಂದು ಹಂತದಲ್ಲಿ ಕರ್ಪ್ಯೂ ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆದೇಶ ನೀಡಿದ್ದಾರೆ.
ಇಂದು ರಾತ್ರಿಯಿಂದ ಏಪ್ರಿಲ್ 14ರ ತನಕ ಅಂದರೆ, ಮೂರು ವಾರಗಳ ಕಾಲ ಲಾಕ್ ಡೌನ್ ಇರಲಿದೆ. ಮುಂದಿನ ಸುಮಾರು 21 ದಿನಗಳ ಕಾಲ ದೇಶವೇ ಲಾಕ್ ಡೌನ್ ಆಗಲಿದ್ದು ಜನತೆ ಸಹಕಾರ ನೀಡಬೇಕಾಗಿದೆ ಎಂದು ಮನವಿ ಮಾಡಿದ್ದಾರೆ.
"ಕೊರೊನಾ ನಿಂಯಂತ್ರಿಸಲು ಜನತೆ ಮನೆಯೊಳಗೆ ಇರುವುದೇ ಹೊರತು ಬೇರೆ ಯಾವುದೇ ದಾರಿ ಇಲ್ಲ ಎಂದಿದ್ದಾರೆ. ದಯವಿಟ್ಟು ಎಲ್ಲರು ಮನೆಯಲ್ಲೇ ಇರಿ... ಮನೆಯಲ್ಲೇ ಇರಿ... ಮನೆಯಲ್ಲೇ ಇರಿ ಎಂದು ಪ್ರಧಾನಿ ನರೇಂದ್ರ ಮೋದಿ ಕೈ ಮುಗಿದು ಕೇಳಿಕೊಂಡಿದ್ದಾರೆ".
ಕೊರೊನಾ ಬಗ್ಗೆ ತಪ್ಪು ಕಲ್ಪನೆಯಿಂದ ನಾವು ನಮ್ಮನ್ನು, ನಮ್ಮ ಕುಟುಂಬ, ಸಮಾಜ, ದೇಶವನ್ನೇ ಸಂಕಷ್ಟದಕ್ಕೆ ಒಳಪಡಿಸುತ್ತೇವೆ. ಹೀಗೆ ಮುಂದುವರೆದರೆ, ದೇಶವೇ ಬಹುದೊಡ್ಡ ತಲೆದಂಡ ತೆರಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
ದೇಶದ ಜನತೆ ನಾವು ನಮ್ಮ ಸಂಕಲ್ಪವನ್ನು ಪೂರೈಸಬೇಕಾಗಿದೆ. ಕೈಮುಗಿದು ಕೇಳುತ್ತಿದ್ದೇನೆ, ದಯವಿಟ್ಟು ಮನೆಯಲ್ಲೇ ಇರಿ. ಮನೆಯಲ್ಲೇ ಇರಿ ಎಂಬುವುದನ್ನು ಮತ್ತೆ ಮತ್ತೆ ಒತ್ತಿ ಹೇಳಿದ್ದಾರೆ. ಮನೆಯಲ್ಲಿರುವ ಸಂದರ್ಭ ಯೋಚಿಸಿ ದೇಶಕ್ಕಾಗಿ ಸೇವೆ ಸಲ್ಲಿಸುವವರನ್ನು ನೆನಪಿಸಿ. ತಮ್ಮ ಜೀವದ ಹಂಗು ತೊರೆದು ಕರ್ತವ್ಯ ಮಾಡುವ ವೈದ್ಯರು, ದಾದಿಯರು, ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳು ದಿನ ರಾತ್ರಿಯೆನ್ನದೆ ಕಾರ್ಯ ನಡೆಸುತ್ತಿದ್ದಾರೆ. ಅವರನ್ನು ನಾವು ಸ್ಮರಿಸಬೇಕಾಗಿದೆ. ಎಲ್ಲಾ ಸಿಬ್ಬಂದಿಗಳನ್ನು ನೆನಪಿಸಿ ಅವರಿಗಾಗಿ ಪ್ರಾರ್ಥಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿಕೊಂಡಿದ್ದಾರೆ.
ಇನ್ನು 24 ಗಂಟೆ ಕೆಲಸ ಮಾಡುವ ಮಾಧ್ಯಮದವರ ಬಗ್ಗೆಯೂ ಯೋಚಿಸಿ, ಪೊಲೀಸರ ಬಗ್ಗೆಯೂ ಯೋಚಿಸಿ. ನಮ್ಮ, ನಮ್ಮ ಕುಟುಂಬದವರನ್ನು ರಕ್ಷಿಸಲು ಪ್ರಾಣ ಪಣದಲ್ಲಿಟ್ಟು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರನ್ನು ಈ ಸಂದರ್ಭದಲ್ಲಿ ಸ್ಮರಿಸುವ ಅಗತ್ಯವಿದೆ ಎಂದು ಮನವಿ ಮಾಡಿಕೊಂಡಿದ್ದಾರೆ.