ನವದೆಹಲಿ, ಮಾ 24 (DaijiworldNews/SM): ಕೊರೊನಾ ನಿಯಂತ್ರಣಕ್ಕೆ ದೇಶದಲ್ಲಿರುವುದು ಏಕೈಕ ಮಾರ್ಗ, ಜನತೆ ಮನೆಯಲ್ಲೇ ಇರುವುದು. ಪ್ರಧಾನಿ ನರೇಂದ್ರ ಮೋದಿಯವರು ಕೂಡ ಬೇರೆ ಯಾವುದೇ ದಾರಿ ಇಲ್ಲದೆ ಅಸಹಾಯಕರಾಗಿ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈ ನಡುವೆ ಕೊರೊನಾ ನಿಯಂತ್ರಣಕ್ಕೆ ಶ್ರಮಿಸುವವರಿಗೆ ವಿಶೇಷ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.
ಹಗಲಿರುಳು ದುಡಿಯುವ ವೈದ್ಯರಿಗೆ ಕೃತಜ್ಞತೆ:
ಮನೆಯಲ್ಲಿರುವ ಸಂದರ್ಭ ಯೋಚಿಸಿ ದೇಶಕ್ಕಾಗಿ ಸೇವೆ ಸಲ್ಲಿಸುವವರನ್ನು ನೆನಪಿಸಿ. ತಮ್ಮ ಜೀವದ ಹಂಗು ತೊರೆದು ಕರ್ತವ್ಯ ಮಾಡುವ ವೈದ್ಯರು, ದಾದಿಯರು, ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳು ದಿನ ರಾತ್ರಿಯೆನ್ನದೆ ಕಾರ್ಯ ನಡೆಸುತ್ತಿದ್ದಾರೆ. ಅವರನ್ನು ನಾವು ಸ್ಮರಿಸಬೇಕಾಗಿದೆ. ಎಲ್ಲಾ ಸಿಬ್ಬಂದಿಗಳನ್ನು ನೆನಪಿಸಿ ಅವರಿಗಾಗಿ ಪ್ರಾರ್ಥಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿಕೊಂಡಿದ್ದಾರೆ.
ಮಾಧ್ಯಮದವರಿಗೂ ಅಭಿನಂದನೆ:
ಇನ್ನು ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ 24 ಗಂಟೆ ಕೆಲಸ ಮಾಡುವ ಮಾಧ್ಯಮದವರ ಬಗ್ಗೆಯೂ ಯೋಚಿಸಿ ಎಂದು ಹೇಳಿರುವ ಅವರು, ಮಾಧ್ಯಮ ಮಿತ್ರರು ಕೂಡ ಹಗಲಿರುಳೆನ್ನದೆ ಕೆಲಸ ಮಾಡುತ್ತಿದ್ದಾರೆ. ದೇಶದೆಲ್ಲೆಡೆ ಜಾಗೃತಿಯನ್ನು ಮೂಡಿಸುತ್ತಿದ್ದಾರೆ ಎಂದಿದ್ದಾರೆ.
ಪೊಲೀಸರಿಗೂ ಅಭಿನಂದನೆ:
ಇನ್ನು ನಿಸ್ವಾರ್ಥ ಸೇವೆ ನೀಡುವ ಪೊಲೀಸರ ಬಗ್ಗೆಯೂ ಯೋಚಿಸಿ. ನಮ್ಮ ಕುಟುಂಬದವರನ್ನು ರಕ್ಷಿಸಲು ಪ್ರಾಣ ಪಣದಲ್ಲಿಟ್ಟು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರನ್ನು ಈ ಸಂದರ್ಭದಲ್ಲಿ ಸ್ಮರಿಸುವ ಅಗತ್ಯವಿದೆ ಎಂದು ಪ್ರಧಾನಿ ಮನವಿ ಮಾಡಿಕೊಂಡಿದ್ದಾರೆ.