ಲಕ್ನೋ, ಮಾ.25 (Daijiworld News/MSP) : ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ದೇಶಾದ್ಯಂತ 21 ದಿನಗಳ ಕಾಲ ಲಾಕ್ ಡೌನ್ ಜಾರಿಯಾಗಿದೆ. ಆದರೂ ಜನ ಕೊರೊನಾ ಹರಡುವಿಕೆಯ ಬಗ್ಗೆ ತಲೆಕೆಡಿಕೊಳ್ಳದೆ ಬೇಕಾಬಿಟ್ಟಿ, ಮಾರುಕಟ್ಟೆ, ದಿನಸಿ ಅಂಗಡಿಗಳಿಗೆ ನುಗ್ಗಿ ಅಗತ್ಯಕ್ಕಿಂತ ಹೆಚ್ಚಿನ ಸಾಮಾನುಗಳನ್ನು ಖರೀದಿಸುತ್ತಿರುವುದು ಸಾಮಾನ್ಯವಾಗಿದೆ.
ಕೊರೊನಾ ಸಾಂಕ್ರಮಿಕವಾಗದಂದೆ ತಡೆಗಟ್ಟಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಬಹುಮುಖ್ಯವಾಗಿದೆ. ಆದರೆ, ಸಾರ್ವಜನಿಕರು ಇದ್ಯಾವುದರ ಬಗ್ಗೆಯೂ ಗಮನ ಹರಿಸದೆ ಅಗತ್ಯ ವಸ್ತುಗಳಿಗೆ ಮಾರುಕಟ್ಟೆಗಳಿಗೆ ಮುಗಿಬೀಳುತ್ತಿರುವುದನ್ನು ಕಂಡು ಉತ್ತರ ಪ್ರದೇಶದ ಸಿಎಂ ಯೋಗಿ ರಾಜ್ಯದ ಜನತೆಯ ಬಳಿ ವಿಶೇಷವಾದ ಮನವಿಯೊಂದನ್ನು ಮಾಡಿಕೊಂಡಿದ್ದಾರೆ.
ದಯವಿಟ್ಟು ಹೀಗೆ ಗುಂಪು ಗುಂಪಾಗಿ ಖರೀದಿ ಮಾಡಲೆಂದು ಮಾರುಕಟ್ಟೆಗಳಿಗೆ ತೆರಳಬೇಡಿ, ಕೊರೊನಾ ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಉತ್ತರ ಪ್ರದೇಶ ಸರ್ಕಾರ ಇಂದಿನಿಂದಲೇ ಅಗತ್ಯವಾದ ವಸ್ತುಗಳನ್ನು ನಿಮ್ಮ ಮನೆ ಬಾಗಿಲುಗಳಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತದೆ ಎಂಬ ಭರವಸೆ ನೀಡಿದ್ದಾರೆ.
ಜನರ ಬಳಿಗೆ ಅಗತ್ಯ ವಸ್ತುಗಳನ್ನು ಸಾಗಿಸಲೆಂದು 1000 ವಾಹನಗಳನ್ನು ಈಗಾಗಲೇ ಗುರುತಿಸಲಾಗಿದೆ. ಹೀಗಾಗಿ ಮಾರುಕಟ್ಟೆ ಬಳಿ ತೆರಳಿ ಅಪಾಯವನ್ನು ಮೈಮೇಲೆ ಎಳೆದುಕೊಳ್ಳಬೇಡಿ, ನಿಮ್ಮ ಹಾಗೂ ನಿಮ್ಮ ಕುಟುಂಬದ ಸುರಕ್ಷತೆ ಮುಖ್ಯ , ಹೀಗಾಗಿ ಮನೆಯಿಂದ ಹೊರಗೆ ಕಾಲಿಡಬೇಡಿ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮನೆಯಲ್ಲೇ ಉಳಿಯಿರಿ ಎಂದು ಕರೆ ನೀಡಿದ್ದಾರೆ.