ಪುಣೆ, ಮಾ.25 (DaijiworldNews/PY) : ಕೊರೊನಾ ವೈರಸ್ ದೇಶಾದ್ಯಂತ ವ್ಯಾಪಿಸಿದ್ದು, ಶಂಕಿತ ಸೋಂಕಿತರಿಗೆ ರೋಗಲಕ್ಷಣಗಳನ್ನು ದೃಢಪಡಿಸಲು ಟೆಸ್ಟ್ ಕಿಟ್ಗಳ ತುರ್ತು ಅಗತ್ಯವಾಗಿವೆ. ಈ ಸಮಯದಲ್ಲೇ ಮೊದಲ ಮೇಡ್ ಇನ್ ಇಂಡಿಯಾ ಕಿಟ್ ಸಿದ್ದವಾಗಿದೆ.
ಕೊರೊನಾ ವೈರಸ್ ಸೋಂಕು ಪರೀಕ್ಷೆಗೆ ಮೊಟ್ಟ ಮೊದಲ ಬಾರಿಗೆ ಮೇಡ್ ಇನ್ ಇಂಡಿಯಾ ಕಿಟ್ ಅನ್ನು ಪುಣೆ ಮೂಲದ ಮಾಲಿಕ್ಯುಲರ್ ಡೈಯಾಗ್ನೋಸ್ಟಿಕ್ಸ್ ಕಂಪನಿ, ಮೈಲ್ಯಾಬ್ ಡಿಸ್ಕವರಿ ಸೊಲ್ಯೂಷನ್ಸ್ ತಯಾರಿಸಿದೆ.
ಈ ಕಿಟ್ ಕೇವಲ 6 ವಾರಗಳಲ್ಲಿ ಸಿದ್ದವಾಗಿದ್ದು, ದಾಖಲೆ ನಿರ್ಮಿಸಿದೆ. ಭಾರತೀಯ ಎಫ್ ಡಿಎ/ ಕೇಂದ್ರ ಔಷಧಿಗಳ ಪ್ರಮಾಣಿತ ನಿಯಂತ್ರಣ ಸಂಸ್ಥೆ (ಸಿಡಿಎಸ್ ಸಿಒ)ಯಿಂದ ಈ ಟೆಸ್ಟಿಂಗ್ ಕಿಟ್ಗೆ ವಾಣಿಜ್ಯ ಅನುಮೋದನೆ ದೊರೆತಿದೆ.
ಮೈಲ್ಯಾಬ್ ಪ್ಯಾಥೋ ಡಿಟೆಕ್ಟ್ ಕೋವಿಡ್-19 ಕ್ವಾಲಿಟೆಟೀವ್ ಪಿಸಿಆರ್ ಕಿಟ್ ಅನ್ನು ತಯಾರಿಸುವುದಕ್ಕೆ ಸ್ಥಳೀಯ ಹಾಗೂ ಕೇಂದ್ರ ಸರ್ಕಾರದ ಸಹಕಾರದಿಂದ ಸಾಧ್ಯವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಸಿಡಿಸಿ ಮಾರ್ಗಸೂಚಿಗಳ ಪ್ರಕಾರ ದಾಖಲೆಯ ಸಮಯದಲ್ಲಿ ಕೊರೊನಾ ಕಿಟ್ ಅನ್ನು ತಯಾರಿಸಲಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಹಸ್ಮುಖ್ ರಾವಲ್ ಹೇಳಿದ್ದಾರೆ. ಕೇವಲ 2.5 ಗಂಟೆಗಳಲ್ಲಿ ಈ ಕಿಟ್ನಿಂದ ಸೋಂಕು ಪರೀಕ್ಷೆ ಫಲಿತಾಂಶ ಲಭ್ಯವಾಗಲಿದೆ.