ಹೈದರಾಬಾದ್, ಮಾ.25 (DaijiworldNews/PY) : "ಜನರು ಕರ್ಫ್ಯೂ ಉಲ್ಲಂಘನೆ ಮಾಡಿದರೆ ಕಂಡಲ್ಲಿ ಗುಂಡು ಹೊಡೆಯಲು ಆದೇಶ ನೀಡಲಾಗುವುದು" ಎಂದು ತೆಲಂಗಾಣ ಸರ್ಕಾರ ಜನರಿಗೆ ಎಚ್ಚರಿಕೆಯ ಆದೇಶ ನೀಡಿದೆ.
ಈ ವಿಚಾರವಾಗಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಕೆಸಿ ಚಂದ್ರಶೇಖರ್ ರಾವ್ ಅವರು, "ನಾನು ಮನೆಯಿಂದ ಹೊರಬರಬೇಡಿ ಎಂದು ಮನವಿ ಮಾಡುತ್ತೇನೆ. ಆದರೂ ಮನೆಯಿಂದ ಹೊರಬರುವುದನ್ನು ನಿಲ್ಲಸದೇ ಇದ್ದರೆ ಕಂಡಲ್ಲಿ ಗುಂಡು ಹೊಡೆಯಲು ಆದೇಶ ನೀಡುತ್ತೇನೆ" ಎಂದು ಹೇಳಿದರು.
"ಈ ಪರಿಸ್ಥಿತಿಯನ್ನು ಒಂದು ವೇಳೆ ಪೊಲೀಸರಿಗೆ ನಿಯಂತ್ರಣ ಮಾಡಲು ಆಗದೇ ಇದ್ದಲ್ಲಿ ಗುಂಡು ಹಾರಿಸಲು ಆದೇಶ ನೀಡುತ್ತೇವೆ. ಸೇನೆಯನ್ನು ಕಾನೂನು ಸುವ್ಯವಸ್ಥೆಗೆ ರಾಜ್ಯಕ್ಕೆ ಕರೆತರಲು ನನಗೆ ಇಷ್ಟವಿಲ್ಲ. ಆ ರೀತಿಯ ಪರಿಸ್ಥಿತಿಗೆ ಹೋಗದೇ ಇರಲಿ ಎಂದು ಆಶಿಸೋಣ" ಎಂದು ತಿಳಿಸಿದರು.
"14 ದಿನಗಳ ಕಾಲ ವಿದೇಶದಿಂದ ಬಂದವರು ಕಡ್ಡಾಯವಾಗಿ ಮನೆಯಲ್ಲಿ ಇರಬೇಕು. ಈ ಆದೇಶವನ್ನು ಉಲ್ಲಂಘಿಸಿದ್ದೇ ಆದಲ್ಲಿ ಪಾಸ್ಪೋರ್ಟ್ ವಶಕ್ಕೆ ಪಡದುಕೊಂಡು ರದ್ದು ಮಾಡಲಾಗುವುದು" ಎಂದು ಹೇಳಿದ್ದಾರೆ.
ಮಂಗಳವಾರ ತೆಲಂಗಾಣದಲ್ಲಿ ಒಟ್ಟು 6 ಪ್ರಕರಣಗಳು ಬೆಳಕಿಗೆ ಬಂದಿದ್ದು, ಒಟ್ಟು 39 ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದೆ.