ಬೆಂಗಳೂರು, ಮಾ.25 (DaijiworldNews/PY) : ವ್ಯಾಪಿಸುತ್ತಿರುವ ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸರ್ಕಾರ ಹೇಳುತ್ತಿದ್ದು, ಅದರಂತೆ ದಕ್ಷಿಣ ವಿಭಾಗದ ಪೊಲೀಸರು ಹೊಸ ಮಾರ್ಗವೊಂದನ್ನು ಕಂಡುಕೊಂಡಿದ್ದಾರೆ.
ವಿಭಾಗದ ಪ್ರತಿಯೊಂದು ಠಾಣೆ ವ್ಯಾಪ್ತಿಯಲ್ಲಿರುವ ದಿನಸಿ ಹಾಗೂ ಇತರೆ ಅಗತ್ಯ ವಸ್ತುಗಳ ಅಂಗಡಿ ಮುಂದೆ ವೃತ್ತಗಳನ್ನು ಹಾಕಲಾಗುತ್ತಿದ್ದು, ಒಂದು ವೃತ್ತದಿಂದ ಇನ್ನೊಂದು ವೃತ್ತಕ್ಕೆ ಮೂರು ಅಡಿಯಷ್ಟು ಅಂತರವಿದೆ.
ಅಂಗಡಿಗಳಿಗೆ ಯಾರೇ ಸಾರ್ವಜನಿಕರು ಬಂದರೆ ವೃತ್ತದಲ್ಲೇ ನಿಲ್ಲಬೇಕು. ಸರತಿ ಸಾಲಿನಲ್ಲಿ ನಿಂತುಕೊಂಡು ಅಂಗಡಿಯೊಳಗೆ ಹೋಗಿ ವಸ್ತುಗಳನ್ನು ಖರೀದಿಸಬೇಕು.
ಆಯಾ ಠಾಣೆಯ ಪೊಲೀಸರೇ ಪ್ರತಿಯೊಂದು ಅಂಗಡಿಗೂ ಭೇಟಿ ನೀಡಿ ವೃತ್ತಗಳನ್ನು ಹಾಕಿಸುತ್ತಿದ್ಧಾರೆ. ಮಳೆ ಬಂದು ವೃತ್ತ ಅಳಿಸಿ ಹೋದರೆ ಪುನಃ ವೃತ್ತ ಹಾಕುವಂತೆಯೂ ಸೂಚಿಸುತ್ತಿದ್ದಾರೆ.
ಹಾಲಿನ ಕೇಂದ್ರಗಳು, ಮಳಿಗೆಗಳು, ಅಂಗಡಿ, ತರಕಾರಿ, ಹಣ್ಣು ಮಳಿಗೆ ಹೀಗೆ ಪ್ರಿತಿ ಮಳಿಗೆಯಲ್ಲೂ ಸಾರ್ವಜನಿಕರು ಮೂರು ಅಡಿ ದೂರದಲ್ಲೇ ನಿಲ್ಲುತ್ತಿದ್ದಾರೆ.
ಇದೊಂದು ಉತ್ತಮ ಕಾರ್ಯವಾಗಿದ್ದು, ಸೋಂಕು ತಗುಲಿದ ವ್ಯಕ್ತಿಗಳು ಯಾರಾದರೂ ಬಂದರೂ ಬೇರೆಯವರಿಗೆ ತೊಂದರೆ ಆಗುವುದಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
ಯಾವುದೇ ಭಯ ಬೇಡ. ಎಲ್ಲರೂ ಒಗ್ಗಟ್ಟಾಗಿ ಕೊರೊನಾ ವಿರುದ್ದ ಹೋರಾಡೋಣ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳೋಣ ಎಂದು ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಸೆಪೆಟ್ ಹೇಳಿದರು.