ಚಿಕ್ಕಬಳ್ಳಾಪುರ, ಮಾ.25 (Daijiworld News/MSP) : ಮೆಕ್ಕಾದಿಂದ ಹಿಂದಿರುಗಿದ್ದ ಹೋಮ್ ಕ್ವಾರಂಟೈನ್ ನಲ್ಲಿದ್ದ ಗೌರಿಬಿದೂರಿನ 70 ವರ್ಷದ ಶಂಕಿತ ಕೊರೊನಾ ಸೋಂಕಿತ ವೃದ್ಧೆಯೊಬ್ಬರು ಬೆಂಗಳೂರಿನ ಬೌರಿಂಗ್ ಆಸ್ಪತ್ರೆ ಆಸ್ಪತ್ರೆಯಲ್ಲಿ ಮೃತಪಟ್ಟದ್ದಾರೆ ಎಂದು ತಿಳಿದುಬಂದಿದೆ.
ಚಿಕ್ಕಬಳ್ಳಾಪುರದಲ್ಲಿ ಒಂದೇ ಕುಟುಂಬದಲ್ಲಿ ಮೂವರಿಗೆ ಸೋಂಕು ಪತ್ತೆಯಾದವಾದರ ಸಂಬಂಧಿಕರಾಗಿದ್ದರು ಎಂದು ತಿಳಿದುಬಂದಿದೆ. ಹೋಮ್ ಕ್ವಾರೆಂಟೈನ್ ನಲ್ಲಿದ್ದ ಇವರು ತೀವ್ರ ಅಸ್ವಸ್ಥರಾಗಿದ್ದು ಮಂಗಳವಾರ ರಾತ್ರಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ವೃದ್ಧೆಯ ಆರೋಗ್ಯ ಮತ್ತಷ್ಟು ಬಿಗಡಾಯಿಸಿದ ಕಾರಣ ಅವರನ್ನು ತಕ್ಷಣವೇ ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಆಕೆಯ ಆರೋಗ್ಯ ತೀರಾ ಹದಗೆಟ್ಟು ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಹೋಮ್ ಕ್ವಾರಂಟೈನ್ ನಲ್ಲಿದ್ದ ಮಹಿಳೆ ಸಾವನ್ನಪ್ಪಿದ್ದು ಇವರು ಎದೆನೋವು, ಹಾಗೂ ಪೃಷ್ಠಭಾಗದ ಮುರಿತದಿಂದ ಬಳಲುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಮಹಿಳೆಯ ಸಾವಿಗೆ ಕೋವಿಡ್ 19 ಸೋಂಕು ಕಾರಣವೇ ಎಂಬುದು ಪರೀಕ್ಷಾ ವರದಿಗಳ ಬಳಿಕವೇ ಖಚಿತವಾಗಬೇಕಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಅವರು ಟ್ವಿಟ್ಟರ್ ನಲ್ಲಿ ಮಾಹಿತಿ ನೀಡಿದ್ದಾರೆ.
ಇವರ ಗಂಟಲು ದ್ರವದ ಮಾದರಿಯನ್ನು ಈಗಾಗಲೇ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದ್ದು, ಇದರ ವರದಿ ಇನ್ನಷ್ಟೇ ಬರಬೇಕಿದೆ. ಈ ನಡುವೆ ವೃದ್ಧೆ ಕೋವಿಡ್ 19 ಸೋಂಕಿನಿಂದಲೇ ಈ ಸಾವು ಸಂಭವಿಸಿರಬುದೆಂದು ಇದೀಗ ಶಂಕಿಸಲಾಗುತ್ತಿದೆ.