ರಾಂಚಿ, ಮಾ.25 (Daijiworld News/MB) : ಕೊರೊನಾ ವೈರಸ್ ಐಸೋಲೇಷನ್ ವಾರ್ಡ್ನಲ್ಲಿ ಸೇವೆ ಸಲ್ಲಿಸಲು ನಿಯೋಜನೆ ಮಾಡಿದ ಕಾರಣಕ್ಕಾಗಿ ವೈದ್ಯ ದಂಪತಿ ರಾಜೀನಾಮೆ ನೀಡಿದ ಘಟನೆ ಜಾರ್ಖಂಡ್ನ ಪಶ್ಚಿಮ ಸಿಂಗಭುಂ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ನಡೆದಿದೆ.
ಈ ದಂಪತಿಗಳು ತಮ್ಮ ರಾಜೀನಾಮೆ ಪತ್ರವನ್ನು ಮೊದಲು ವಾಟ್ಸ್ಆಪ್ನಲ್ಲಿ ಕಳುಹಿಸಿದ್ದು ಬಳಿಕ ಇಮೇಲ್ ಮಾಡಿದ್ದಾರೆ ಎಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ರಾಜ್ಯ ಆರೋಗ್ಯ ಇಲಾಖೆಯ ಕಾರ್ಯದರ್ಶಿ ಡಾ.ನಿತಿನ್ ಮದನ್ ಕುಲಕರ್ಣಿ ಅವರು ರಾಜೀನಾಮೆ ನೀಡಿರುವ ಡಾ. ಅಲೋಕ್ ಟಿರ್ಕೆ ತಕ್ಷಣವೇ ಕೆಲಸಕ್ಕೆ ಹಾಜರಾಗಬೇಕೆಂದು ಆದೇಶಿಸಿದ್ದಾರೆ ಎಂದು ಪಶ್ಚಿಮ ಸಿಂಗಭುಂ ಸಿವಿಲ್ ಸರ್ಜನ್ ಡಾ.ಮಂಜು ದುಬೆ ಹೇಳಿದ್ದಾರೆ.
ಹಾಗೆಯೇ ಆರೋಗ್ಯ ಇಲಾಖೆಯ ಕಾರ್ಯದರ್ಶಿಯವರ ನಿರ್ದೇಶನದಂತೆ, 24 ಗಂಟೆಗಳಗಾಗಿ ಕರ್ತವ್ಯಕ್ಕೆ ಹಾಜರಾಗಬೇಕು. ಇಲ್ಲವಾದಲ್ಲಿ ಜಾರ್ಖಂಡ್ ಸಾಂಕ್ರಾಮಿಕ ಕಾಯಿಲೆ (ಕೋವಿಡ್-19) ನಿಯಂತ್ರಣ ಕಾಯ್ದೆ -2020 ಮತ್ತು ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆ, 1987 ಅಡಿ ಎಫ್ಐಆರ್ ದಾಖಲಿಸಲಾಗುವುದು ಎಂದು ನಾನು ಅವರಿಗೆ ತಿಳಿಸಿದ್ದೇನೆ. ಈ ಕೂಡಲೇ ಅವರು ಕರ್ತವ್ಯಕ್ಕೆ ಹಾಜರಾಗದಿದ್ದಲ್ಲಿ ಭಾರತೀಯ ಮೆಡಿಕಲ್ ಕೌನ್ಸಿಲ್ ನೋಂದಣಿಯನ್ನೂ ರದ್ದು ಪಡಿಸಲಾಗುವುದು ಎಂದು ದುಬೆ ಅವರು ತಿಳಿಸಿದ್ದಾರೆ.
ಡಾ.ಟಿರ್ಕೆ ಜಿಲ್ಲಾ ಮಿನರಲ್ ಫಂಡ್ ಟ್ರಸ್ಟ್ ಅಧೀನದಲ್ಲಿರುವ ಜಿಲ್ಲಾ ಆಸ್ಪತ್ರೆಯಲ್ಲಿದ್ದರು. ಅಲ್ಲಿ ರಾಜೀನಾಮೆ ನೀಡಿ ಹೊಸತಾಗಿ ಆರಂಭಿಸಿದ ದುಮ್ಕಾ ಮೆಡಿಕಲ್ ಕಾಲೇಜು ಹಾಸ್ಪಿಟಲ್ಗೆ ಸೇರಿದ್ದರು. ಅಲ್ಲಿ ರಾಜೀನಾಮೆ ಈಡಿ ಬಳಿಕ ಸದರ್ ಆಸ್ಪತ್ರೆಗೆ ಕೆಲವು ದಿನಗಳ ಹಿಂದೆಯಷ್ಟೇ ಸೇರಿದ್ದರು. ಮೂರು ದಿನಗಳ ಹಿಂದೆ ಅವರಿಗೆ ಕೊರೊನಾ ವೈರಸ್ ಐಸೋಲೇಷನ್ ವಾರ್ಡ್ನಲ್ಲಿ ಕರ್ತವ್ಯ ನಿರ್ವಹಿಸಲು ಸೂಚಿಸಲಾಗಿತ್ತು. ಸದರ್ ಆಸ್ಪತ್ರೆಯಲ್ಲಿರುವ 23 ವೈದ್ಯರುಗಳಲ್ಲಿ ಈ ದಂಪತಿ ಹೊರತು ಪಡಿಸಿ ಯಾರೊಬ್ಬರೂ ಇಲ್ಲಿಯವರೆಗೆ ರಜೆ ತೆಗೆದುಕೊಂಡಿಲ್ಲ, ರಾಜೀನಾಮೆ ನೀಡಿಲ್ಲ . ಅವರು ಪತ್ನಿ ಡಾ.ಸೌಮ್ಯ ಅವರಿಗೆ ಆರೋಗ್ಯ ಸಮಸ್ಯೆ ಇರುವ ಕಾರಣ ರಾಜೀನಾಮೆ ನೀಡಿರುವುದಾಗಿ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಡಾ.ಟಿರ್ಕೆ ಅವರು, "ನನ್ನ ಪತ್ನಿ ಮತ್ತು ಸಹೋದರಿಗೆ ರೋಗ ಪ್ರತಿರೋಧ ಶಕ್ತಿ ಕುಂದಿದ್ದು, ಬೇಗನೆ ಸೋಂಕು ತಗುಲುವ ಸಾಧ್ಯತೆ ಇರುತ್ತದೆ. ಆ ಕಾರಣದಿಂದಾಗಿ ರಾಜೀನಾಮೆ ನೀಡಲು ನಿರ್ಧರಿಸಿದೆವು. ನನ್ನ ಸಹೋದರಿಗೆ ಇತ್ತೀಚೆಗೆ ಕಿಡ್ನಿ ಕಸಿ ನಡೆದಿತ್ತು. ನಾನು ಹಿಂಜರಿದು ಓಡಿಹೋಗುವ ಸ್ವಭಾವದವನಲ್ಲ. ಸದ್ಯ ನಾನು ಕೆಲಸ ಮಾಡುವೆ. ಕೊರೊನಾ ಕಡಿಮೆ ಆದ ಬಳಿಕ ರಾಜೀನಾಮೆ ನೀಡಿ ನಾನು ಕೆಲಸ ಬಿಡುತ್ತೇನೆ ಎಂದು ಡಾ.ಟಿರ್ಕೆ ಹೇಳಿದ್ದಾರೆ.