ನವದೆಹಲಿ, ಮಾ.25 (DaijiworldNews/PY) : ಕೊರೊನಾ ಸೋಂಕು ವ್ಯಾಪಕಗೊಳ್ಳುತ್ತಿರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಮಲೇರಿಯಾ ಚಿಕಿತ್ಸೆಗೆ ಬಳಸುವ ಔಷಧ ಹೈಡ್ರಾಕ್ಸಿಕ್ಲೋರೊಕ್ವಿನ್ ರಫ್ತನ್ನು ನಿಷೇಧಿಸಿದೆ. ಈ ಕ್ರಮವನ್ನು ದೇಶದ ಮಾರುಕಟ್ಟೆಯಲ್ಲಿ ಔಷಧ ಕೊರತೆಯಾಗದಂತೆ ನೋಡಿಕೊಳ್ಳುವ ಸಲುವಾಗಿ ತೆಗೆದುಕೊಳ್ಳಲಾಗಿದೆ.
ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ನಿರ್ದೇಶಕ ಜನರಲ್ ಬಲರಾಮ್ ಭಾರ್ಗವ ಅವರು ಸೋಮವಾರ ಆರೋಗ್ಯ ಕಾರ್ಯಕರ್ತರಿಗೆ ದೃಢೀಕೃತ ಕೊರೊನಾ ವೈರಸ್ ಪ್ರಕರಣಗಳಲ್ಲಿ ಚಿಕಿತ್ಸೆ ನೀಡುವ ಸಲುವಾಗಿ ಹೈಡ್ರಾಕ್ಸಿಕ್ಲೋರೊಕ್ವಿನ್ ಒದಗಿಸಿಕೊಡಬೇಕು ಎಂದು ಸರ್ಕಾರಕ್ಕೆ ಶಿಫರಾಸು ಮಾಡಿದ್ದರು.
ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ, ಐಸಿಎಂಆರ್ ರಚಿಸಿರುವ ರಾಷ್ಟ್ರೀಯ ಕೊರೊನಾ ಟಾಸ್ಕ್ಫೋರ್ಸ್ ಶಿಫಾರಸು ಮಾಡಿರುವ ಔಷಧವನ್ನು ತುರ್ತು ಸಂದರ್ಭಗಳಲ್ಲಿ ಚಿಕಿತ್ಸೆಯಲ್ಲಿ ಬಳಸಲು ಅನುಮೋದನೆ ನೀಡಿತ್ತು.
ಬುಧವಾರ ವಿದೇಶಿ ವ್ಯಾಪಾರ ಮಹಾಪ್ರಧಾನ ನಿರ್ದೇಶನಾಲಯ ಹೈಡ್ರಾಕ್ಸಿಕ್ಲೋರೊಕ್ವಿನ್ ರಫ್ತು ನಿಷೇಧಿಸಿರುವ ಬಗ್ಗೆ ಅಧಿಸೂಚನೆ ಹೊರಡಿಸಿದೆ. ಅದಾಗಿಯೂ, ಮಾನವೀಯ ನೆಲೆಗಟ್ಟಿನ ಆಧಾರದಲ್ಲಿ ಪ್ರಕರಣಗಳ ಗಂಭೀರತೆ ನೋಡಿಕೊಂಡು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಶಿಫಾರಸಿನ ಮೇರೆಗೆ ಔಷಧ ರಫ್ತು ಮಾಡಲು ಸರ್ಕಾರ ಅನುವು ಮಾಡಿಕೊಡಲಿದೆ ಎಂದು ಡಿಜಿಎಫ್ಟಿ ತಿಳಿಸಿದೆ.
ಇತ್ತೀಚೆಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಕೊರೊನಾ ವೈರಸ್ಗೆ ಚಿಕಿತ್ಸೆ ನೀಡುವಲ್ಲಿ ಹೈಡ್ರಾಕ್ಸಿಕ್ಲೋರೊಕ್ವಿನ್ ಮತ್ತು ಕ್ಲೋರೊಕ್ವಿನ್ ಪರಿಣಾಮಕಾರಿಯಾಗಿವೆ ಎಂದಿದ್ದರು. ಆ ನಂತರ ಈ ಔಷಧದ ರಫ್ತಿನ ಪ್ರಮಾಣ ಹೆಚ್ಚಾಗಿದೆ ಎಂದು ವರದಿಯಾಗಿದೆ.