ನವದೆಹಲಿ, ಮಾ.25 (DaijiworldNews/PY) : ಕೊರೊನಾ ವೈರಸ್ ಕಾಟಕ್ಕೆ ಸಿಲುಕಿ ಸಂಕಷ್ಟಕ್ಕೊಳಗಾಗಿ 21 ದಿನಗಳ ಕಾಲ ಲಾಕ್ ಡೌನ್ ಸ್ಥಿತಿಗೆ ಸಿಲುಕಿರುವ ದೇಶದ ಜನಸಾಮಾನ್ಯರ ನೆರವಿಗೆ ಇದೀಗ ಕೇಂದ್ರ ಸರ್ಕಾರ ಮುಂದಾಗಿದ್ದು, ನೂತನ ಪಡಿತರ ಯೋಜನೆಯೊಂದನ್ನು ಜಾರಿಗೊಳಿಸಿದೆ.
ಈ ವಿಚಾರವಾಗಿ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಪ್ರಕಾಶ್ ಜಾವಡೇಕರ್ ಅವರು, "ಈ ಯೋಜನೆಯ ಅನ್ವಯ 80 ಕೋಟಿ ಪಡಿತರದಾರರಿಗೆ ಪ್ರತೀ ಕೆ.ಜಿ.ಗೆ 2 ರೂ. ದರದಲ್ಲಿ ಗೋಧಿ ಹಾಗೂ ಪ್ರತೀ ಕೆ.ಜಿ.ಗೆ 3 ರೂ. ದರದಲ್ಲಿ ಅಕ್ಕಿಯನ್ನು ನೀಡಲು ಕೇಂದ್ರ ಸರಕಾರ ತೀರ್ಮಾನಿಸಿದೆ" ಎಂದು ತಿಳಿಸಿದ್ದಾರೆ.
ಅಲ್ಲದೇ, ಕೇಂದ್ರವು ಕಟ್ಟಡ ಕಾರ್ಮಿಕರಿಗೆ ಉಚಿತ ಊಟವನ್ನು ಪೂರೈಸುವ ತೀರ್ಮಾನಕ್ಕೆ ಬಂದಿದೆ. ಇನ್ನು ಕೊರೊನಾ ವೈರಸ್ ಸಂಬಂಧಿತ ಜಿಲ್ಲಾವಾರು ಹೆಲ್ಪ್ಲೈನ್ ತೆಗೆಯಲು ಕೂಡಾ ತೀರ್ಮಾನಿಸಲಾಗಿದೆ.
ಆದರೆ. ಪಡಿತರವನ್ನು ಜನರಿಗೆ ಸಿಗುವಂತೆ ಮಾಡುವ ಹಾಗೂ ಇನ್ನಿತರ ಸವಲತ್ತುಗಳನ್ನು ಜನರಿಗೆ ತಲುಪಿಸುವುದಕ್ಕೆ ಸಂಬಂಧಿಸಿದಂತೆ ಮಾರ್ಗದರ್ಶಿ ಸೂತ್ರಗಳನ್ನು ಸರ್ಕಾರ ದಿನದ ಅಂತ್ಯದೊಳಗೆ ಬಿಡುಗಡೆಗೊಳಿಸುವ ನಿರೀಕ್ಷೆಯಿದೆ.
ಪಡಿತರದಾರರಿಗೆ ಪಡಿತರವನ್ನು ಮೂರು ತಿಂಗಳ ಮುಂಗಡವಾಗಿಯೇ ನೀಡಲಾಗುವುದು. ಗುತ್ತಿಗೆದಾರರಿಗೆ ಕಡ್ಡಾಯ ವೇತನ, ದಿನಸಿ ವಸ್ತುಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದರೆ ಕಠಿಣಕ್ರಮ, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಗೆ 1340 ಕೋಟಿ ರೂಪಾಯಿಗಳ ನಿಧಿ ಬಿಡುಗಡೆ ಎಂಬ ಪ್ರಮುಖ ವಿಚಾರಗಳನ್ನು ತಿಳಿಸಿದ್ದಾರೆ.