ಚಾಮರಾಜನಗರ, ಮಾ.25 (Daijiworld News/MB) : ತಾಲ್ಲೂಕಿನ ಹೊಂಗನೂರು ಗ್ರಾಮದ ನಾಯಕ ಸಮುದಾಯದ ಯಜಮಾನರು ಕೊರೊನಾ ವೈರಸ್ ಹರಡುವುದನ್ನು ತಡೆಯುವ ಪ್ರಯತ್ನವಾಗಿ ನಿರ್ಣಯವೊಂದನ್ನು ಕೈಗೊಂಡಿದ್ದಾರೆ. ಸಮುದಾಯದ ಜನ ಅನಗತ್ಯವಾಗಿ ಮನೆಯಿಂದ ಹೊರಗಡೆ ಬಂದು ಗುಂಪು ಸೇರಿದರೆ ₹ 1000 ದಂಡ ಹಾಕುವುದಾಗಿ ಘೋಷಿಸಿದ್ದಾರೆ.
ಈ ನಾಯಕರ ಬೀದಿಗಳಲ್ಲಿ 350 ಮನೆಗಳಿದ್ದು ನಿರ್ಣಯದ ಬಗ್ಗೆ ಬೀದಿಯಲ್ಲಿ ಧ್ವನಿ ವರ್ಧಕದಲ್ಲಿ ಘೋಷಣೆಯನ್ನೂ ಮಾಡಲಾಗಿದೆ.
ಸರ್ಕಾರ ಈಗಾಗಲೇ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಂಡಿದೆ. ಜನರು ಕೂಡ ಸರ್ಕಾರಕ್ಕೆ ಸಹಕಾರ ನೀಡಬೇಕು. ಈ ಉದ್ದೇಶದಿಂದ ಬುಧವಾರ ಬೆಳಿಗ್ಗೆ ಸಮುದಾಯದ ಯಜಮಾನರು ಸಭೆ ಸೇರಿ ಈ ನಿರ್ಣಯಕ್ಕೆ ಬಂದಿದ್ದಾರೆ ಎಂದು ಎಂದು ಸಮುದಾಯದ ಮುಖಂಡ, ತಾಲ್ಲೂಕು ಪಂಚಾಯಿತಿ ಸದಸ್ಯ ಚಂದ್ರು ತಿಳಿಸಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.
ಹಾಗೆಯೇ ಅಗತ್ಯ ವಸ್ತುಗಳ ಖರೀದಿಗಾಗಿ ಒಬ್ಬೊಬ್ಬರು ಹೊರಗಡೆ ಬರಬಹುದು. ಆದರೆ ಮೂರು ಜನರಿಗಿಂತ ಜಾಸ್ತಿ ಅನಗತ್ಯವಾಗಿ ಗುಂಪು ಸೇರುವಾಗಿಲ್ಲ. ಜನರು ದಂಡ ಕಟ್ಟ ಬೇಕಾಗುತ್ತದೆ ಎಂಬ ಭಯದಿಂದಲ್ಲಾದರೂ ಹೊರಗಡೆ ಬರದಿರಲಿ ಎಂಬುದು ನಮ್ಮ ಉದ್ದೇಶ ಎಂದು ಹೇಳಿದ್ದಾರೆ.