ಗದಗ, ಮಾ.25 (Daijiworld News/MSP) : ಕೊರೊನಾ ವೈರಸ್ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಗದಗ - ಬೇಟಗೇರಿ ನಗರ ಸಭೆ ವ್ಯಾಪ್ತಿಯ ಸಾರ್ವಜನಿಕರಿಗೆ ನಾಳೆಯಿಂದ ಮನೆ ಮನೆಗೆ ತರಕಾರಿ ಮಾರಾಟಕ್ಕೆ ಕ್ರಮ ಜರುಗಿಸಲಾಗುತ್ತಿದೆ ಎಂದು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಯತೀಶ ತಿಳಿಸಿದರು.
ಗದಗ - ಬೆಟಗೇರಿ ನಗರ ಸಭೆ ವ್ಯಾಪ್ತಿಯ ಆವರಣದಲ್ಲಿಂದು ಜರುಗಿದ ತರಕಾರಿ, ಕಿರಾಣಿ ಹಾಗೂ ಹೊಟೇಲ್ ವರ್ತಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಗರ ಸಭೆ ವ್ಯಾಪ್ತಿಯ ತರಕಾರಿ ಮಾರುಕಟ್ಟೆಯಲ್ಲಿ ಜನಸಾಂದ್ರತೆ ಹೆಚ್ಚಾಗುತ್ತಿದ್ದು ಇದರಿಂದ ವೈರಸ್ ತಗಲುವ ಭೀತಿಯಿದ್ದು ಮುಂಜಾಗ್ರತಾ ಕ್ರಮವಾಗಿ ನಾಳೆಯಿಂದ ನಗರದ ತರಕಾರಿ ಮಾರುಕಟ್ಟೆಗಳನ್ನು ಬಂದ್ ಮಾಡಲಾಗುತ್ತದೆ ಎಂದು ತಿಳಿಸಿದರು.
ನಗರ ಸಭೆ ವ್ಯಾಪ್ತಿಯ ಸಾರ್ವಜನಿಕರಿಗೆ ತೊಂದರೆಯಾಗದಂತೆ ನಾಳೆಯಿಂದ ತರಕಾರಿಗಳನ್ನು ವಾರ್ಡ್ವಾರು ತಳ್ಳು ಗಾಡಿಗಳ ಮುಖಾಂತರ ಮನೆ ಮನೆಗೆ ಮಾರಾಟ ಮಾಡಲು ವರ್ತಕರು ಸಹಮತ ವ್ಯಕ್ತ ಪಡಿಸಿದ್ದು ಈ ಕಾರ್ಯಕ್ಕೆ ಪೊಲೀಸ್ ಇಲಾಖೆ ಅಗತ್ಯದ ಸಹಕಾರ ನೀಡಲಾಗುವುದು. ವಾರ್ಡ್ವಾರು ತರಕಾರಿ ಮಾರಾಟ ಮಾಡುವ ವರ್ತಕರಿಗೆ ಗುರುತಿನ ಚೀಟಿಗಳನ್ನು ನೀಡಲಾಗುವುದು. ವರ್ತಕರು, ವ್ಯಾಪಾರಸ್ಥರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಹಾಗೂ ಸ್ಯಾನಿಟೈಸರ್ಗಳನ್ನು ಬಳಸುವಂತೆ ತಿಳಿಸಿದರು.
ವಾರ್ಡ್ವಾರು ತರಕಾರಿ ಮಾರಾಟ ಮಾಡುವುದರ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲು ನಗರ ಸಭೆ ವತಿಯಿಂದ ಅಗತ್ಯದ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಾರ್ವಜನಿಕರು ತರಕಾರಿ ಖರೀದಿ ಸಂದರ್ಭದಲ್ಲಿ ಮನೆಯಿಂದ ಯಾರದರೂ ಒಬ್ಬರೇ ತರಕಾರಿ ಖರೀದಿಗೆ ಆಗಮಿಸಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಸಾರ್ವಜನಿಕರಲ್ಲಿ ಅವರು ಮನವಿ ಮಾಡಿದರು.
ಕಿರಾಣಿ ಅಂಗಡಿಗಳು ಮುಂಜಾನೆ 7 ಗಂಟೆಯಿಂದ 10 ಗಂಟೆಯವರೆಗೆ ತೆರದಿದ್ದು ಅಂಗಡಿಗಳಿಗೆ ಆಗಮಿಸುವ ಸಾರ್ವಜನಿಕರು ಒಬ್ಬೊಬ್ಬರಾಗಿ ಆಗಮಿಸಿ ಅಗತ್ಯದ ಸಾಮಾಗ್ರಿಗಳನ್ನು ಖರೀದಿ ಮಾಡಲು ಮನವಿ ಮಾಡಿದ ಅವರು ಅಂಗಡಿಗಳಲ್ಲಿ ಸಾಮಾಜಿಕ ಅಂತರ ಹಾಗೂ ಸ್ಯಾನಿಟೈಸರ್ ಬಳಸುವಂತೆ ಸೂಚನೆ ನೀಡಿದರು.
ನಗರದ ಸಾರ್ವಜನಿಕರು ನಾಳೆಯಿಂದ ತರಕಾರಿಗಾಗಿ ಬೀದಿಗೆ ಇಳಿಯದೆ ಅವಶ್ಯವಿರುವ ಕಿರಾಣಿ ಸಾಮಾಗ್ರಿಗಳ ಖರೀದಿಗಾಗಿ ಮನೆಯಿಂದ ಒಬ್ಬ ಸದಸ್ಯರು ನಿಗದಿಪಡಿಸಿದ ಸಮಯದಲ್ಲಿ ಬಂದು ಖರೀದಿಸಿ ವೈರಸ್ ಸೋಂಕು ಹರಡದಂತೆ ಈ ಮುಂಜಾಗ್ರತಾ ಕಾರ್ಯದಲ್ಲಿ ಪ್ರತಿಯೊಬ್ಬರು ಸಹಕರಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರುದ್ರೇಶ, ಗದಗ ತಹಶೀಲ್ದಾರ ಶ್ರೀನಿವಾಸ ಮೂರ್ತಿ ಕುಲಕರ್ಣಿ, ಗದಗ - ಬೆಟಗೇರಿ ನಗರ ಸಭೆ ಪೌರಾಯುಕ್ತ ಮನ್ಸೂರ ಅಲಿ, ಸಿ.ಪಿ.ಐ.ಆರ್.ಎಫ್, ದೇಸಾಯಿಗದಗ ಡಿಎಸ್.ಪಿ. ಪ್ರಹ್ಲಾದ, ನಗರದ ತರಕಾರಿ, ಕಿರಾಣಿ ವರ್ತಕರು ಸಭೆಯಲ್ಲಿ ಉಪಸ್ಥಿತರಿದ್ದರು.