ಬೆಂಗಳೂರು, ಮಾ.25 (DaijiworldNews/PY) : "ಒಂದು ಕಡೆ ಮಾರುಕಟ್ಟೆ ಬಂದ್ ಆಗಿದೆ. ಇನ್ನೊಂದೆಡೆ ರೈತರು ಮನೆಯಿಂದ ಹೊರಗೆ ಕಾಲಿಡಲು ಆಗುತ್ತಿಲ್ಲ. ಇದರಿಂದ ಉತ್ಪನ್ನ ಹಾಳಾಗುತ್ತಿದೆ. ಜತೆಗೆ ರೇಷ್ಮೆ ಬಿಚ್ಚಾಣಿಕೆದಾರರೂ ಕೆಲಸವಿಲ್ಲದೆ ದಿನನಿತ್ಯದ ಬದುಕಿಗೆ ಪರಿತಪಿಸುತ್ತಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರವೇ ರೈತರಿಂದ ರೇಷ್ಮೆಗೂಡುಗಳನ್ನು ಸಂಗ್ರಹಿಸಲು ವ್ಯವಸ್ಥೆ ಮಾಡಬೇಕು" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸಿಎಂ ಬಿಎಸ್ವೈ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ಧಾರೆ.
"ಮಂಡ್ಯ, ತುಮಕೂರು, ರಾಮನಗರ, ಚನ್ನಪಟ್ಟಣ, ಕನಕಪುರ, ಮಾಗಡಿ, ಕುಣಿಗಲ್, ಮಳವಳ್ಳಿ ಸೇರಿದಂತೆ ರಾಜ್ಯದ ಅನೇಕ ಕಡೆ ರೇಷ್ಮೆ ಬೆಳೆಗಾರರು ಗೂಡುಗಳನ್ನು ಉತ್ಪಾದಿಸಿಟ್ಟಿದ್ದಾರೆ. ಆದರೆ ಕೊರೊನಾ ಸೋಂಕು ನಿಯಂತ್ರಣಕ್ಕೆ ಹೇರಿರುವ ಲಾಕ್ಡೌನ್ನಿಂದಾಗಿ ರೈತರು ರೇಷ್ಮೆಗೂಡುಗಳನ್ನು ಮಾರುಕಟ್ಟೆಗಳಿಗೆ ತೆಗೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ" ಎಂದು ಹೇಳಿದ್ದಾರೆ.
"ನಿಯಂತ್ರಣಕ್ಕಾಗಿ ಕಟ್ಟುನಿಟ್ಟಾದ ಕ್ರಮ ಇಂದಿನ ಅಗತ್ಯತೆಗೆ ಎಂಬುದು ಸರಿ. ಆದರೆ, ಅದರಿಂದ ರೈತರ ಉತ್ಪನ್ನಗಳು ನಾಶವಾಗಬಾರದು. ಹಾಗೇನಾದರು ಆದರೆ ಯಾರಿಗೂ ಲಾಭವಾಗದೇ ರಾಷ್ಟ್ರೀಯ ನಷ್ಟವಾಗುತ್ತದೆ. ರಾಜ್ಯ ಸರ್ಕಾರ ರೇಷ್ಮೆಗೂಡು ವಿಲೇವಾರಿಗೆ ಮಾರುಕಟ್ಟೆ ಒದಗಿಸಬೇಕು. ರೇಷ್ಮೆನೂಲು ಬಿಚ್ಚಾಣಿಕೆದಾರರ ಸಂಕಷ್ಟಕ್ಕೆ ರಾಜ್ಯ ಸರ್ಕಾರ ಸ್ಪಂದಿಸಬೇಕು" ಎಂದು ತಿಳಿಸಿದರು.