ಬೆಂಗಳೂರು, ಮಾ 25 (DaijiworldNews/SM): ಕೊರೊನಾ ನಿಯಂತ್ರಣಕ್ಕೆ ದೇಶಕ್ಕೆ ದೇಶವನ್ನೇ ಲಾಕ್ ಡೌನ್ ಮಾಡಲಾಗಿದೆ. ವೈರಸ್ ಹರಡುವಿಕೆಯನ್ನು ತಡೆಯಲು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ 21 ದಿನಗಳ ಲಾಕ್ಡೌನ್ ಮಧ್ಯೆ ಜನರಿಗೆ ಅಗತ್ಯ ವಸ್ತುಗಳ ಕೊರತೆಯಾಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ದಿನದ 24 ಗಂಟೆಯೂ ದಿನಸಿ ಅಂಗಡಿಗಳನ್ನು ತೆರೆದಿಡುವಂತೆ ಕರ್ನಾಟಕ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಪ್ರವೀಣ್ ಸೂದ್ ಅವಕಾಶ ಕಲ್ಪಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ನಾಗರಿಕರ ಅನುಕೂಲಕ್ಕಾಗಿ ಅಗತ್ಯ ವಸ್ತುಗಳ ಅಂಗಡಿಗಳು ಮತ್ತು ಆಹಾರ ಪದಾರ್ಥಗಳನ್ನು ಬಯಸುವ ಸೂಪರ್ಮಾರ್ಕೆಟ್ ಗಳು ರಾಜ್ಯದಾದ್ಯಂತ 24 ಗಂಟೆಯೂ ತೆರೆದಿರಬಹುದು. ಈ ಮೂಲಕ ಜನಸಂದಣಿಯನ್ನು ತಪ್ಪಿಸಲು ಸಹಕಾರಿಯಾಗಿದ್ದು, ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಬೇಕಾಗಿದೆ ಎಂದು ಮನವಿ ಮಾಡಿಕೊಂಡಿದ್ದಾರೆ.
ಇನ್ನು ವೈದ್ಯಕೀಯ ಆರೈಕೆಯ ಅಗತ್ಯವಿರುವ ರೋಗಿಗಳಿಗೆ ಯಾವುದೇ ಕರ್ಫ್ಯೂ ಪಾಸ್ ಅಗತ್ಯವಿಲ್ಲ. ಆಸ್ಪತ್ರೆಗೆ ಮತ್ತು ಹೊರಗೆ ಹೋಗಲು ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಇದಕ್ಕೂ ಮೊದಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಾರ್ಚ್ 31 ರವರೆಗೆ ರಾಜ್ಯವ್ಯಾಪಿ ಲಾಕ್ ಡೌನ್ ಘೋಷಿಸಿದ್ದರು. ಲಾಕ್ ಡೌನ್ ಸಮಯದಲ್ಲಿ ಅನಿವಾರ್ಯವಲ್ಲದ ಸೇವೆಗಳನ್ನು ನಿರ್ಬಂಧಿಸಲಾಗಿದೆ.