ನವದೆಹಲಿ, ಮಾ 25 (DaijiworldNews/SM): ಮಹಾಮಾರಿ ಕೊರೋನಾ ವೈರಸ್ ನಿಯಂತ್ರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಸಮರ ಸಾರಿದ್ದಾರೆ. 21 ದಿನಗಳ ಕಾಲ ದೇಶದಲ್ಲಿ ಲಾಕ್ ಡೌನ್ ಆದೇಶ ನೀಡಿದ್ದಾರೆ. ಈ ನಡುವೆ ಇದೀಗ ತಮ್ಮ ಕ್ಷೇತ್ರದಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಮಹಾಭಾರತ ಯುದ್ಧ ಗೆಲ್ಲಲು 18 ದಿನಗಳು ಬೇಕಾದವು. ಆದರೆ, ಮಹಾಮಾರಿ ಕೊರೊನಾ ವಿರುದ್ಧ ಗೆದ್ದು, ವೈರಸ್ ನಿಯಂತ್ರಣಕ್ಕೆ 21 ದಿನಗಳ ಅವಶ್ಯಕತೆ ಇದೆ ಎಂದಿದ್ದಾರೆ.
ತಮ್ಮ ಕ್ಷೇತ್ರ ವಾರಣಾಸಿಯಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, 21 ದಿನಗಳ ಕಾಲ ದೇಶವನ್ನೇ ಲಾಕ್ ಡೌನ್ ಮಾಡಲಾಗಿದೆ. ಕೊರೊನಾ ವಿರುದ್ಧ ನಾವು ಗೆಲ್ಲಲೇ ಬೇಕಾಗಿದೆ. ಮಹಾಭಾರತ ಯುದ್ಧ ಗೆಲ್ಲಲು 18 ದಿನಗಳು ಅಗತ್ಯವಾದವು. ಆದರೆ ಕೊರೋನಾ ವೈರಸ್ ವಿರುದ್ಧ ಗೆಲ್ಲಲು ನಮಗೆ 21 ದಿನಗಳು ಅನಿವಾರ್ಯವಾಗಿವೆ. ಈ ಎಲ್ಲಾ ದಿನಗಳಲ್ಲೂ ನಾವು ನಮ್ಮ ಮನೆಯಲ್ಲೇ ಇದ್ದುಕೊಂಡು ಕೊರೊನಾ ವಿರುದ್ಧ ಸಮರ ಸಾರಬೇಕಾಗಿದೆ ಎಂದಿದ್ದಾರೆ.
ದೇಶದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿವೆ. ಲಾಕ್ ಡೌನ್ ಆದೇಶದ ಬಳಿಕವೂ ಮತ್ತಷ್ಟು ಪ್ರಕರಣಗಳು ಬೆಳಕಿಗೆ ಬಂದಿವೆ. ಭಾರತದಲ್ಲಿ ಸೋಂಕಿತರ ಸಂಖ್ಯೆ 606ಕ್ಕೆ ಏರಿಕೆಯಾಗಿದೆ. ಭಾರತದಲ್ಲಿ ಇಲ್ಲಿಯವರೆಗೂ 10 ಮಂದಿ ಕೊರೋನಾ ವೈರಸ್ ಗೆ ಬಲಿಯಾಗಿದ್ದಾರೆ. ಈ ಕಾರಣದಿಂದಲೇ ೨೧ ದಿನ ಮನೆಗಳಲ್ಲೇ ಉಳಿಯುವುದು ಅನಿವಾರ್ಯ ಎಂಬುವುದಾಗಿ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.