ನವದೆಹಲಿ, ಮಾ.26 (DaijiworldNews/PY) : ಭಾರತ ಹಾಗೂ ರಷ್ಯಾ ಮಾರಣಾಂತಿಕ ಕೊರೊನಾ ವೈರಸ್ ವಿರುದ್ದ ಹೋರಾಡಲು ಜಂಟಿ ಹೋರಾಟ ನಡೆಸಲಿದೆ. ಈ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಿದ್ದಾರೆ.
ಬುಧವಾರ ರಾತ್ರಿ ದೂರವಾಣಿ ಮೂಲಕ ಪ್ರಧಾನಿ ಮೋದಿ ಹಾಗೂ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಕೊರೊನಾ ವೈರಸ್ ತಡೆ ಹಾಗೂ ಮುನ್ನೆಚ್ಚರಿಕಾ ಕ್ರಮಗಳ ವಿಚಾರವಾಗಿ ಚರ್ಚೆ ನಡೆಸಿದರು. ಉಭಯ ರಾಷ್ಟ್ರಗಳು ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ವೈರಸ್ ತಡೆಗೆ ಜಂಟಿಯಾಗಿ ಕಾರ್ಯ ನಿರ್ವಹಿಸಲು ತೀರ್ಮಾನಿಸಿದರು. ಕೊರೊನಾ ವೈರಸ್ಗೆ ಔಷಧ ತಯಾರಿಕೆ, ವೈಜ್ಞಾನಿಕ ಸಂಶೋಧನೆ, ಮಾನವೀಯತೆ ಕಾರ್ಯಗಳಿಗೆ ಒತ್ತು ನೀಡಲು ತೀರ್ಮಾನಿಸಿದರು.
ನಂತರ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾದಲ್ಲಿ ಕೊರೊನಾ ವೈರಸ್ಗೆ ತುತ್ತಾಗಿರುವವರು ಶೀಘ್ರವಾಗಿ ಗುಣಮುಖರಾಗುವಂತೆ ಆಶಿಸಿದ್ದು, ಪುಟಿನ್ ನೇತೃತ್ವದಲ್ಲಿ ರಷ್ಯಾದಲ್ಲಿ ಕೊರೊನಾ ತಡೆ ಕಾರ್ಯವನ್ನು ಶ್ಲಾಘಿಸಿದರು. ಇದೇ ಸಂದರ್ಭ ಭಾರತಕ್ಕೆ ರಷ್ಯಾದ ನಾಗರಿಕರು ಸುರಕ್ಷಿವಾಗಿ ವಾಪಾಸಾಗಲು ಎಲ್ಲಾ ರೀತಿಯಾದ ಅನುಕೂಲಗಳನ್ನು ಕಲ್ಪಿಸಿಕೊಡುವುದಾಗಿ ಪ್ರಧಾನಿ ಮೋದಿ ಅವರು ಭರವಸೆ ನೀಡಿದರು.