ಬೆಂಗಳೂರು, ಮಾ.26 (DaijiworldNews/PY) : ಅಡುಗೆ ಅನಿಲ ಪೂರೈಕೆ ಸೇವೆಯಲ್ಲಿ ಯಾವುದೇ ವ್ಯತ್ಯಯವಾಗದೇ, ಎಲ್ಪಿಜಿ ಸಿಲಿಂಡರ್ಗಳ ವಿತರಣೆಯ ಕಾರ್ಯ ಸುಗಮವಾಗಿ ಸಾಗುತ್ತಿದ್ದು, ಗ್ರಾಹಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಗ್ಯಾಸ್ ವಿತರಕ ಕಂಪೆನಿಗಳು ಪ್ರಕಟಣೆಯಲ್ಲಿ ತಿಳಿಸಿವೆ.
ದೇಶಾದ್ಯಂತ ಕೊರೊನಾ ವೈರಸ್ ವ್ಯಾಪಕವಾಗಿ ಹರಡುವ ಭೀತಿಯ ನಿಟ್ಟಿನಲ್ಲಿನ ದೇಶವನ್ನು ಎ.14ವರೆಗೂ ಲಾಕ್ಡೌನ್ ಮಾಡಲಾಗಿದ್ದರೂ, ಅಡುಗೆ ಅನಿಲ ಪೂರೈಕೆಯಲ್ಲಿ ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂದು ವಿತರಣಾ ಕಂಪನಿಗಳು ತಿಳಿಸಿವೆ.
ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳಾದ ಇಂಡಿಯನ್ ಆಯಿಲ್, ಬಿಪಿಸಿ, ಮತ್ತು ಎಚ್ಪಿಸಿಗಳು ರಾಜ್ಯದಲ್ಲಿ ದಿನವಿಡೀ ಅಡುಗೆ ಅನಿಲ ಪೂರೈಕೆಗೆ ಕ್ರಮ ಕೈಗೊಂಡಿದ್ದು ವಿತರಣೆ ಕಾರ್ಯಗಳು ಸುಗಮವಾಗಿ ನಡೆಯುತ್ತಿವೆ ಎಂಬುದಾಗಿ ಅನಿಲ ವಿತರಣೆ ಕಂಪೆನಿಗಳ ಉಪ ಮಹಾ ಪ್ರಬಂಧಕ ನೂರಾನ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಲ್ಪಿಜಿ ಸಿಲಿಂಡರ್ಗಳ ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿ ಇದ್ದು, ಸಾರ್ವಜನಿಕರ ಬೇಡಿಕೆ ಪೂರೈಸಲು ಯಾವುದೇ ತುರ್ತು ಸಂದರ್ಭದಲ್ಲೂ ಕಂಪನಿಗಳು ಸಜ್ಜಾಗಿವೆ. ಗ್ಯಾಸ್ ಸಿಲಿಂಡರ್ ವಿತರಣೆ ಮಾಡುವುದಕ್ಕೆ ರಾಜ್ಯ ಸರ್ಕಾರ ಸಹ ವಿಶೇಷ ಅವಕಾಶ ಕಲ್ಪಿಸಿದೆ. ಎಂದು ತಿಳಿಸಿದ್ದಾರೆ.
ತಮ್ಮ ಅಗತ್ಯಕ್ಕೆ ಅನುಸಾರವಾಗಿ ಸಾರ್ವಜನಿಕರು ಗ್ಯಾಸ್ ಬುಕ್ ಮಾಡುವಂತೆ ಅವರು ಮನವಿ ಮಾಡಿದ್ದಾರೆ.