ಚಿಕ್ಕಬಳ್ಳಾಪುರ, ಮಾ 26 (Daijiworld News/MSP) : ಕೊರೊನಾ ಸೋಂಕಿನಿಂದಾಗಿ ಕರ್ನಾಟಕದಲ್ಲಿ ಮತ್ತೊಂದು ಬಲಿಯಾಗಿದೆ. ಮೆಕ್ಕಾದಿಂದ ಹಿಂದಿರುಗಿದ್ದ ಹೋಮ್ ಕ್ವಾರಂಟೈನ್ ನಲ್ಲಿದ್ದ ಗೌರಿಬಿದೂರಿನ 70 ವರ್ಷದ ವೃದ್ದೆ ಬೆಂಗಳೂರಿನ ಬೌರಿಂಗ್ ಆಸ್ಪತ್ರೆ ಆಸ್ಪತ್ರೆಯಲ್ಲಿ ಬುಧವಾರ ಮೃತಪಟ್ಟಿರುವುದು ಕೊರೊನಾ ಸೋಂಕಿನಿಂದಲೇ ಎಂದು ಸ್ಪಷ್ಟವಾಗಿದೆ.
ಬಳ್ಳಾರಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಆರೋಗ್ಯ ಸಚಿವ ಬಿ.ಶ್ರಿರಾಮುಲು, ಬುಧವಾರ ಸಾವನ್ನಪ್ಪಿದ ಮಹಿಳೆಯ ವರದಿ ಇಂದು ಬಂದಿದ್ದು, ಅವರು ಕೋವಿಡ್-19 ಸೋಂಕಿನಿಂದಲೇ ಸಾವನ್ನಪ್ಪಿರುವುದಾಗಿ ವರದಿ ಬಂದಿದೆ ಎಂದರು.
ಈ ವೃದ್ದೆಯೂ, ಚಿಕ್ಕಬಳ್ಳಾಪುರದಲ್ಲಿ ಒಂದೇ ಕುಟುಂಬದಲ್ಲಿ ಮೂವರಿಗೆ ಸೋಂಕು ಪತ್ತೆಯಾದವರ ಸಂಬಂಧಿಕರಾಗಿದ್ದರು ಎಂದು ತಿಳಿದುಬಂದಿದೆ. ಹೋಮ್ ಕ್ವಾರೆಂಟೈನ್ ನಲ್ಲಿದ್ದ ಇವರು ತೀವ್ರ ಅಸ್ವಸ್ಥರಾಗಿದ್ದು ಮಂಗಳವಾರ ರಾತ್ರಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ವೃದ್ಧೆಯ ಆರೋಗ್ಯ ಮತ್ತಷ್ಟು ಬಿಗಡಾಯಿಸಿದ ಕಾರಣ ಅವರನ್ನು ತಕ್ಷಣವೇ ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಆಕೆಯ ಆರೋಗ್ಯ ತೀರಾ ಹದಗೆಟ್ಟು ಮೃತಪಟ್ಟಿದ್ದರು.
ಎದೆನೋವು, ಹಾಗೂ ಪೃಷ್ಠಭಾಗದ ಮುರಿತದಿಂದ ಬಳಲುತ್ತಿದ್ದ ಇವರ ಸಾವು ಕೊರೊನಾ ಸೋಂಕಿನಿಂದ ಸಂಭವಿಸಿರಬಹುದು ಎಂಬ ಸಂಶಯದಲ್ಲಿ ಗಂಟಲಿನ ದ್ರವ ಪರೀಕ್ಷೆಗೆ ರವಾನಿಸಲಾಗಿತ್ತು. ಇದೀಗ ವರದಿ ವೈದ್ಯರ ಕೈ ಸೇರಿದ್ದು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಸ್ಪಷ್ಟವಾಗಿದೆ.