ಹೈದರಾಬಾದ್, ಮಾ.26 (DaijiworldNews/PY) : ಕೊರೊನಾ ಸಾಂಕ್ರಾಮಿಕ ರೋಗದ ವಿರುದ್ದದ ಹೋರಾಟಕ್ಕೆ ಜನಸೇನಾ ಪಕ್ಷದ ಮುಖ್ಯಸ್ಥ, ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರು ಎರಡು ಕೋಟಿ. ರೂ ದೇಣಿಗೆ ನೀಡುವುದಾಗಿ ಘೋಷಿಸಿದ್ದಾರೆ.
ದೇಶಾದ್ಯಂತ ಕೊರೊನಾ ವೈರಸ್ ಅಧಿಕವಾಗುತ್ತಿರುವ ನಡುವೆ ಪವನ್ ಕಲ್ಯಾಣ್ ಅವರು ನೆರವಿಗೆ ಮುಂದಾಗಿದ್ದಾರೆ. ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ಕೇಂದ್ರ ಸರ್ಕಾರಕ್ಕೆ ಸೇರಿ ಒಟ್ಟು 2 ಕೋಟಿ ರೂ. ದೇಣಿಗೆಯನ್ನು ಪವನ್ ಕಲ್ಯಾಣ್ ಅವರು ನೀಡಲಿದ್ದಾರೆ.
ಈ ವಿಚಾರವಾಗಿ ಪವನ್ ಕಲ್ಯಾಣ್ ಅವರು ಟ್ವೀಟ್ ಮಾಡಿದ್ದು, ಆಂಧ್ರ ಪ್ರದೇಶ ಹಾಗೂ ತೆಲಂಗಾಣ ಮುಖ್ಯಮಂತ್ರಿ ವಿಪತ್ತು ಪರಿಹಾರ ನಿಧಿಗೆ ತಲಾ 50 ಲಕ್ಷ ರೂ.ನಂತೆ 1 ಕೋಟಿ ರೂ. ದೇಣಿಗೆ ನೀಡುತ್ತೇನೆ. ಅಲ್ಲದೆ ಪ್ರಧಾನ ಮಂತ್ರಿ ವಿಪತ್ತು ಪರಿಹಾರ ನಿಧಿಗೆ ಒಂದು ಕೋಟಿ ನೀಡಲು ತೀರ್ಮಾನಿಸಿದ್ದೇನೆ ಎಂದು ತಿಳಿಸಿದ್ದಾರೆ
ಕೇಂದ್ರ ಸರ್ಕಾರದ ಸಂದೇಶ ಮತ್ತು ಸಲಹೆಯನ್ನು ಪವನ್ ಕಲ್ಯಾಣ್ ಅವರು ಸ್ವಾಗತಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಕೊರೊನಾ ವೈರಸ್ ವಿರುದ್ದದ ಹೋರಾಟಕ್ಕೆ ಪೂರ್ಣ ಬೆಂಬಲ ನೀಡುತ್ತೇವೆ. ಪ್ರಧಾನಿ ಮೋದಿ ಅವರ ಸಲಹೆಗಳನ್ನು ಜನಸೇನಾ ಪಕ್ಷದ ಮುಖ್ಯಸ್ಥರು ಹಾಗೂ ದೇಶದ ಪ್ರತಿಯೊಬ್ಬ ಪ್ರಜೆ ಪಾಲಿಸಬೇಕು. ಅದರೊಂದಿಗೆ ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ವೈದ್ಯರು, ವೈದ್ಯಕೀಯ ಸಿಬ್ಬಂದಿ ಹಾಗೂ ಇತರರ ಸೇವೆಗಳನ್ನು ಶ್ಲಾಘಿಸಿದ್ದಾರೆ.