ಶಿವಮೊಗ್ಗ, ಮಾ.26 (Daijiworld News/MB) : ಇತ್ತೀಚೆಗೆ ವಿದೇಶದಿಂದ ಆಗಮಿಸಿದ್ದ ಕಾರಣದಿಂದಾಗಿ ಹೋಂ ಕ್ವಾರಂಟೈನ್ ಆದೇಶವಿದ್ದರೂ ಅದನ್ನು ಉಲ್ಲಂಘಿಸಿ ಹೊರಗಡೆ ಸುತ್ತಾಡಿ ಕ್ರಿಕೆಟ್ ಆಡಿದ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಮಹಮ್ಮದ್ ಸುಯಬ್ ಖಾನ್ ಬಿನ್ ಮಸ್ತಾನ್ ಖಾನ್ (30 ವರ್ಷ) ಹಾಗೂ ಮಹಮ್ಮದ್ ಹುಸೇನ್ ಖಾನ್ ಬಿನ್ ಮಸ್ತಾನ್ ಖಾನ್ (28 ವರ್ಷ) ಇವರ ಮೇಲೆ ಪ್ರಕರಣ ದಾಖಲಾಗಿದೆ.
ಇವರು ಇತ್ತೀಚೆಗೆ ಅಬುದಾಬಿಯಿಂದ ಸ್ವ-ಗ್ರಾಮ ತೀರ್ಥಹಳ್ಳಿ ತಾಲ್ಲೂಕಿನ ಮಾಳೂರಿಗೆ ವಾಪಾಸ್ ಆಗಿದ್ದು ಹೋಂ ಕ್ವಾರಂಟೈನ್ ಆದೇಶ ಪಾಲಿಸದೇ ಸುತ್ತಾಡುತ್ತಿದ್ದರು.
ಈ ಇಬ್ಬರು ಮನೆಯಿಂದ ಹೊರಬಂದು ಸುತ್ತಾಡಿದ್ದು ಮಾತ್ರವಲ್ಲದೇ ಕ್ರಿಕೆಟ್ ಆಡಿರುವುದು ತಾಲೂಕು ಆರೋಗ್ಯಾಧಿಕಾರಿ ಜಗದೀಶ್ ಹಾಗೂ ತೀರ್ಥಹಳ್ಳಿ ಸಿಪಿಐ ಗಣೇಶಪ್ಪ ಅವರು ಹೋಂ ಕ್ವಾರಂಟೈನ್ ನಲ್ಲಿರುವವರನ್ನು ತಪಾಸಣೆ ಮಾಡಿದ ಸಂದರ್ಭದಲ್ಲಿ ತಿಳಿದು ಬಂದಿದೆ.
ಹಾಗೆಯೇ ಇವರಿಬ್ಬರ ಪಾಲಕರಾದ ಮಸ್ತಾನ್ ಖಾನ್ ಅಲಿಯಾಸ್ ಬಾಬಾ ಜಾನ್ 65 ವರ್ಷ ಹಾಗೂ ಖತೀಜಾ ಬೀ 56 ವರ್ಷ ಇವರ ವಿರುದ್ಧವೂ ಪ್ರಕರಣ ದಾಖಲಾಗಿದೆ.