ನವದೆಹಲಿ, ಮಾ 26 (Daijiworld News/MSP) : ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಕೇಂದ್ರ ಸರ್ಕಾರವೂ ಕೈಗೊಂಡಿರುವ 21 ದಿನಗಳ "ರಾಷ್ಟ್ರೀಯ ಬೀಗಮುದ್ರೆ" ಕ್ರಮವೂ ನಿಜಕ್ಕೂ " ಸ್ವಾಗತಾರ್ಹ ಹೆಜ್ಜೆ" ಎಂದು ಬೆಂಬಲಿಸಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
"ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ, ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಕೇಂದ್ರ ಸರ್ಕಾರವು ತೆಗೆದುಕೊಳ್ಳುವ ಪ್ರತಿಯೊಂದು ಹೆಜ್ಜೆಯನ್ನೂ ನಾವು ಸಂಪೂರ್ಣವಾಗಿ ಬೆಂಬಲಿಸುತ್ತೇವೆ ಮತ್ತು ಸಹಕರಿಸುತ್ತೇವೆ" ಎಂದು ಸೋನಿಯಾ ಗಾಂಧಿ ನಾಲ್ಕು ಪುಟಗಳ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
"ಇಂತಹ ಸವಾಲಿನ ಮತ್ತು ಅನಿಶ್ಚಿತ ಸಮಯದಲ್ಲಿ, ನಾವು ಪ್ರತಿಯೊಬ್ಬರೂ ಪಕ್ಷಪಾತದ ಹಿತಾಸಕ್ತಿಗಳನ್ನು ಬಿಟ್ಟು , ನಮ್ಮ ದೇಶದ ಕಡೆಗೆ ಮತ್ತು ನಿಜವಾಗಿಯೂ ಮಾನವೀಯತೆಯ ಕಡೆಯಿಂದ ಒಬ್ಬರಿಗೊಬ್ಬ ಕರ್ತವ್ಯವನ್ನು ಗೌರವಿಸುವುದು ಕಡ್ಡಾಯವಾಗಿದೆ. ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್ ಪಕ್ಷದ ಕಡೆಯಿಂದ " ಸಂಪೂರ್ಣ ಬೆಂಬಲ ಮತ್ತು ಸಹಕಾರ" ಎಂದು ಅವರು ಹೇಳಿದರು.
ಎಲ್ಲಾ ಸಾಲದ ಕಂತುಗಳನ್ನು 6 ತಿಂಗಳವರೆಗೆ ಮುಂದೂಡಿ ಈ ಅವಧಿಗೆ ಬ್ಯಾಂಕುಗಳು ಯಾವುದೇ ದಂಡ , ಬಡ್ದಿ ವಿಧಿಸದಂತೆ ಕೇಂದ್ರವು ಪರಿಗಣಿಸಬೇಕು ಎಂದು ಕಾಂಗ್ರೆಸ್ ಮುಖ್ಯಸ್ಥರು ಸಲಹೆ ನೀಡಿದರು.
ದಿನಗೂಲಿ ನೌಕರರು, ಕಾರ್ಮಿಕರು, ಕಟ್ಟಡ ನಿರ್ಮಾಣ ಕಾರ್ಮಿಕರು, ರೈತರು ಮತ್ತು ಅಸಂಘಟಿತ ವಲಯದ ಇತರರಿಗಾಗಿ ಸರ್ಕಾರವು "ನೇರ ನಗದು ವರ್ಗಾವಣೆ ಸೇರಿದಂತೆ ಸಾಮಾಜಿಕ ಸಂರಕ್ಷಣಾ ಕ್ರಮಗಳನ್ನು ತಕ್ಷಣ ಜಾರಿಗೆ ತರಬೇಕು" ಎಂದು ಅವರು ಹೇಳಿದರು.