ನವದೆಹಲಿ, ಮಾ.26 (DaijiworldNews/PY) : ಕೊರೊನಾ ಸೋಂಕು ವ್ಯಾಪಿಸಿರುವ ಹಿನ್ನೆಲೆ ದೇಶದಲ್ಲಿ ವ್ಯಾಪಾರ ಹಾಗೂ ವಹಿವಾಟುಗಳ ಮೇಲೆ ತೀವ್ರ ಪರಿಣಾಮ ಉಂಟಾಗಿದ್ದು, ಬ್ಯಾಂಕ್ಗಳು ವ್ಯಾಪಾರಿಗಳು ಹಾಗೂ ಉದ್ಯಮಿಗಳಿಗೆ ಹಣಕಾಸು ಸಹಕಾರ ನೀಡಲು ಸಿದ್ದವಾಗಿವೆ. ಬುಧವಾರ ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳು ವಿಶೇಷ ತುರ್ತು ಸಾಲ ಸೌಲಭ್ಯ ಘೋಷಿಸಿವೆ.
ಇಂತಹ ಪರಿಸ್ಥಿತಿಯಲ್ಲಿ ಬ್ಯಾಂಕ್ ತನ್ನ ಗ್ರಾಹಕರಿಗೆ ಸಹಾಯವಾಗಲು ಬದ್ದವಾಗಿದೆ. ಆರ್ಥಿಕತೆಯ ವಿವಿಧ ವಲಯಗಳಲ್ಲಿ ಎದುರಾಗಿರುವ ಸವಾಲುಗಳನ್ನು ಗಮನದಲ್ಲಿರಿಸಿಕೊಂಡು ತಕ್ಷಣವೇ ಹೊಸ ಪ್ರಾಡಕ್ಟ್ಗೆ ಚಾಲನೆ ನೀಡಿದ್ದೇವೆ. ಇದರಿಂದ ವ್ಯಾಪಾರಿಗಳು ಹಾಗೂ ಇತರೆ ಗ್ರಾಹಕರಿಗೆ ಅಗತ್ಯ ಹಣಕಾಸು ಸಹಕಾರ ಸಿಗಲಿದೆ ಎಂದು ಇಂಡಿಯನ್ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಪದ್ಮಜ ಚುಂದೂರು ಹೇಳಿದ್ದಾರೆ.
ಕೆನರಾ ಬ್ಯಾಂಕ್, ಯೂಕೊ ಬ್ಯಾಂಕ್, ಇಂಡಿಯನ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ ಹಾಗೂ , ಹಾಗೂ ಇಂಡಿಯನ್ ಓವರ್ಸೀಸ್ ಬ್ಯಾಂಕ್ಗಳು ತುರ್ತು ಸಾಲ ವ್ಯವಸ್ಥೆ ಕಲ್ಪಿಸಿವೆ. ಈಗಾಗಲೇ ಬ್ಯಾಂಕ್ ಸಿಬ್ಬಂದಿ ಸುರಕ್ಷತೆ ಹಾಗೂ ಬ್ಯಾಂಕಿಂಗ್ ಸೇವೆಗಳಿಗೆ ತೊಡುಕಾಗದಂತೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಕೊರೊನಾ ಎಮರ್ಜೆನ್ಸಿ ಲೈನ್ ಆಫ್ ಕ್ರೆಡಿಟ್ (ಸಿಇಎಲ್ಸಿ)ಗೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ 'ಚಾಲನೆ ನೀಡಿದೆ. ಬ್ಯಾಂಕ್ ಆಫ್ ಬರೋಡಾ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಹಾಗೂ ಕಾರ್ಪೊರೇಟ್ ಉದ್ಯಮಿಗಳಿಗಾಗಿ ವಿಶೇಷ ತುರ್ತು ಸಾಲ ನೀಡುತ್ತಿದೆ. ಕಳೆದ ವಾರವೇ ಎಸ್ಬಿಐ ಹೆಚ್ಚುವರಿ ಸಾಲ ನೀಡಿಕೆ ಸೌಲಭ್ಯ ಘೋಷಿಸಿದೆ.
ಸರ್ಕಾರಿ ಸ್ವಾಮ್ಯದ ಬಹುತೇಕ ಬ್ಯಾಂಕ್ಗಳು ಕೊರೊನಾ ವೈರಸ್ ಸಂಕಷ್ಟಕ್ಕೆ ಸಿಲುಕಿರುವ ಕೈಗಾರಿಕೆಗಳು, ಕಾರ್ಪೊರೇಟ್, ವ್ಯಾಪಾರ, ಕೃಷಿ ಮತ್ತು ರಿಟೇಲ್ ಗ್ರಾಹಕರಿಗಾಗಿಯೇ ಸಾಲ ನೀಡುತ್ತಿವೆ. ಉದ್ಯಮಗಳಿಗೆ ಅನುಸಾರ ಹೆಚ್ಚುವರಿಯಾಗಿ ಶೇ.10ರ ವರೆಗೂ ಸಾಲ ಸಹಕಾರ ನೀಡಲಾಗುತ್ತಿದ್ದು, ಒಟ್ಟು ಸಾಲದ ಅವಧಿ 36 ತಿಂಗಳಾಗಿದೆ. ಆರಂಭದ 6 ತಿಂಗಳು ಪಾವತಿಗೆ ತಾತ್ಕಾಲಿಕ ಬಿಡುವು ನೀಡಲಾಗಿದೆ. 1 ವರ್ಷದವರೆಗೂ ನಿಗದಿತ ಬಡ್ಡಿ ದರ ಇರಲಿದೆ. ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ಗರಿಷ್ಠ ₹50 ಲಕ್ಷದ ವರೆಗೂ ಸಾಲ ಸಿಗಲಿದೆ.
ದುಡಿಯುವ ಮಹಿಳೆಯರಿಗಾಗಿ ಇಂಡಿಯನ್ ಬ್ಯಾಂಕ್ ₹5,000ದಿಂದ ಗರಿಷ್ಠ ₹1 ಲಕ್ಷದ ವರೆಗೂ 'ಸಹಾಯ' ಸಾಲ ನೀಡುತ್ತಿದೆ. ಈ ಸಾಲ ಮರು ಪಾವತಿಗೂ ಗರಿಷ್ಠ 36 ತಿಂಗಳು ಮಿತಿ ಇದೆ. ಸುಮಾರು 22 ಲಕ್ಷ ಮಹಿಳೆಯರಿಗೆ ಇದರಿಂದ ಅನುಕೂಲವಾಗಲಿದೆ ಎಂದು ಬ್ಯಾಂಕ್ ತಿಳಿಸಿದೆ.
ಕೊರನಾ ತುರ್ತು ವೇತನ ಸಾಲ ವೇತನ ಪಡೆಯುವ ವರ್ಗಕ್ಕೂ ಲಭ್ಯವಿದೆ. ಇತ್ತೀಚಿನ ವೇತನದ 20 ಪಟ್ಟು ಅಥವಾ ಗರಿಷ್ಠ ₹2 ಲಕ್ಷದ ವರೆಗೂ ಸಾಲ ಸಿಗಲಿದೆ. ವೈದ್ಯಕೀಯ ತುರ್ತು ಹಾಗೂ ಇತರೆ ಖರ್ಚುಗಳಿಗಾಗಿ ಉಪಯೋಗವಾಗಲಿರುವ ಸಾಲ ಕಡಿಮೆ ಬಡ್ಡಿ ದರದಲ್ಲಿ ಸಿಗಲಿದೆ.
ಕಚೇರಿಗಳಲ್ಲಿ ಬ್ಯಾಂಕ್ನ ಶೇ .50ರಷ್ಟು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಬ್ಯಾಂಕ್ ಶಾಖೆಗಳಿಗೆ ಭೇಟಿ ನೀಡುವ ಬದಲು ಗ್ರಾಹಕರು ಡಿಜಿಟಲ್ ವಹಿವಾಟು ನಡೆಸುವಂತೆ ಸಲಹೆ ಮಾಡಲಾಗುತ್ತಿದೆ. ಹಣ ಪಾವತಿ ಮತ್ತು ವರ್ಗಾವಣೆಗಳಿಗೆ ಮೊಬೈಲ್ ಬ್ಯಾಂಕಿಂಗ್, ಇಂಟರ್ನೆಟ್ ಬ್ಯಾಂಕಿಂಗ್, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳ ಮೂಲಕ ಪಾವತಿಗೆ ಬ್ಯಾಂಕ್ಗಳು ಉತ್ತೇಜಿಸುತ್ತಿವೆ. ಡಿಜಿಟಲ್ ಪಾವತಿ ಕುರಿತು ವಿಡಿಯೊಗಳ ಮೂಲಕ ಮಾಹಿತಿ ನೀಡಲಾಗುತ್ತಿದೆ. ಮನೆಯ ಬಾಗಿಲಿಗೇ ಪಿಂಚಣಿ ಪಡೆಯುತ್ತಿರುವವರಿಗೆ ಹಣ ಸಂದಾಯ ಮಾಡುವ ಕ್ರಮಗಳ ಬಗ್ಗೆ ಯೋಜನೆ ರೂಪಿಸಲಾಗುತ್ತಿದೆ.