ಬೆಂಗಳೂರು, ಮಾ.26 (DaijiworldNews/PY) : ಮನೆ ಮಾಲೀಕರು ಕೊರೊನಾ ವೈರಸ್ ಸೋಂಕಿತರ ಚಿಕಿತ್ಸೆಯಲ್ಲಿ ತೊಡಗಿರುವ ವೈದ್ಯರು, ವೈದ್ಯಕೀಯ ಸಿಬ್ಬಂದಿ ಮತ್ತು ಹೋಮ್ ಕ್ವಾರಂಟೈನ್ನಲ್ಲಿ ಇರುವವರನ್ನು ಖಾಲಿ ಮಾಡಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಗುರುವಾರ ಶ್ರೀರಾಮುಲು ಅವರು ಅಂಥವರಿಗೆ ಟ್ವೀಟ್ ಮೂಲಕ ಎಚ್ಚರಿಕೆ ನೀಡಿದ್ದಾರೆ.
ಮಾಲೀಕರು ಕೊರೊನಾ ವೈರಸ್ ವಿರುದ್ದ ಹೋರಾಡುತ್ತಿರುವವರ ಮನೆ ಖಾಲಿ ಮಾಡಲು ಒತ್ತಾಯಿಸುವುದು ಅಮಾನವೀಯ ಹಾಗೂ ಗಂಭೀರ ಸ್ವರೂಪದ ಅಪರಾಧವಾಅಗಿದೆ ಎಂದು ಹೇಳಿದ್ದಾರೆ.
ಈ ವಿಚಾರವಾಗಿ ಜಿಲ್ಲಾಧಿಕಾರಿಗಳು, ಪಾಲಿಕೆ ಆಯುಕ್ತರು, ಪೊಲೀಸ್ ಇಲಾಖೆಗೆ ಪತ್ರ ಬರೆದಿದ್ದಾರೆ.
ಕರ್ನಾಟಕದಲ್ಲಿ ಮನೆ ಮಾಲೀಕರು ಕೊರೊನಾ ಸೋಂಕಿತರ ಚಿಕಿತ್ಸೆಯಲ್ಲಿ ತೊಡಗಿರುವ ವೈದ್ಯರು, ಪ್ಯಾರಾಮೆಡಿಕಲ್ ಸಿಬ್ಬಂದಿ, ಆರೋಗ್ಯ ಇಲಾಖೆ ನೌಕರರನ್ನು ಖಾಲಿ ಮಾಡುವಂತೆ ಒತ್ತಾಯಿಸುತ್ತಿರುವ ಬಗ್ಗೆ ಹತ್ತಾರು ದೂರುಗಳು ನಮಗೆ ಬಂದಿವೆ. ಇದು ಸಾರ್ವಜನಿಕ ಸೇವೆಯಲ್ಲಿರುವ ಕರ್ತವ್ಯಕ್ಕೆ ಅಡ್ಡಿಪಡಿಸಿದಂತೆ. ರಾಜ್ಯದಲ್ಲಿ ಕೊರೊನಾ ವೈರಸ್ ತಡೆಯಲು ಸಾಂಕ್ರಾಮಿಕ ಕಾಯಿಲೆ ನಿಯಂತ್ರಣಾ ಕಾಯ್ದೆ, ಸೋಂಕು ರೋಗಗಳ ಕಾಯ್ದೆ ಜಾರಿಯಲ್ಲಿದೆ. ಮನೆ ಖಾಲಿ ಮಾಡಿಸುವಂತಹ ದೂರು ಕೇಳಿ ಬಂದರೆ ಅಂಥವರ ವಿರುದ್ದ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು, ಬಿಬಿಎಂಪಿ ಆಯುಕ್ತರು, ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ.
ಅದಲ್ಲದೇ, ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಿಂದ ಕೈಗೊಂಡ ಕ್ರಮಗಳ ಬಗ್ಗೆ ನಿತ್ಯ ವರದಿ ಪಡೆಯಲಾಗುವುದು ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಸೋಂಕು ಹರಡುವುದನ್ನು ತಡೆಗಟ್ಟುತಿರುವ ಹಾಗೂ ರೋಗಿಗಳನ್ನು ಗುಣಪಡಿಸಲು ಹಗಲು-ರಾತ್ರಿ ಶ್ರಮಿಸುತ್ತಿರುವ ವೈದ್ಯಕೀಯ ಕ್ಷೇತ್ರದ ಸಿಬ್ಬಂದಿಗಳನ್ನು, ಮನೆ ಖಾಲಿ ಮಾಡಲು ಮನೆ ಮಾಲೀಕರು ಒತ್ತಾಯಿಸುವುದು ಗಂಭೀರ ಸ್ವರೂಪದ ಅಪರಾಧ. ಇಂತಹ ಸಮಯದಲ್ಲಿ ನಮ್ಮೆಲ್ಲರ ಬೆಂಬಲ ಸಿಬ್ಬಂದಿಗಳಿಗೆ ಅಗತ್ಯವೇ ಹೊರತು ಕಿರುಕುಳ ಅಲ್ಲ ಎಂದು ತಿಳಿಸಿದ್ದಾರೆ.