ಬೆಂಗಳೂರು, ಮಾ.26 (DaijiworldNews/PY) : ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಕೊರೊನಾ ಪ್ರತ್ಯೇಕ ನಿಗಾ ಘಟಕದಲ್ಲಿ ತುರ್ತಾಗಿ ವೆಂಟಿಲೇಟರ್ಗಳು, ಅಗತ್ಯ ವೈದ್ಯಕೀಯ ಪರಿಕರಿಗಳ ಖರೀದಿಗೆ ಮೋಹನ್ ಅವರು ತಮ್ಮ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ 2 ಕೋಟಿ ರೂ. ಮೊತ್ತವನ್ನು ಗುರುವಾರ ಬಿಡುಗಡೆ ಮಾಡಿದ್ದಾರೆ.
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ 1700 ಹಾಸಿಗೆಗಳ ಪ್ರತ್ಯೇಕ ಘಟಕ ಘೋಷಣೆಯಾದ ಬೆನ್ನಲ್ಲೇ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬೇಕಾದ ಎಲ್ಲ ಉಪಕರಣಗಳ ಸಿದ್ಧತೆಗೆ ಜನಪ್ರತಿನಿಧಿಗಳು ಕೂಡ ಕೈಜೋಡಿಸಿದ್ದಾರೆ. ಬಿಜೆಪಿ ಸಂಸದ ಪಿ.ಸಿ.ಮೋಹನ್ ಅವರು ಗುರುವಾರ ಮುಖ್ಯಮಂತ್ರಿ ಶ್ರೀ ಬಿ.ಎಸ್.ಯಡಿಯೂರಪ್ಪನವರಿಗೆ ಪತ್ರ ಬರೆದು, ಆಸ್ಪತ್ರೆಯಲ್ಲಿ ವೆಂಟಿಲೇಟರ್ ಸೇರಿದಂತೆ ಅಗತ್ಯ ಉಪಕರಣಗಳ ಖರೀದಿಗೆ ತಮ್ಮ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ 2 ಕೋಟಿ ರೂ.ಗಳನ್ನು ನೀಡಿದ್ದಾರೆ.
ರಾಜ್ಯ ಸರ್ಕಾರ ಕೊರೊನಾ ವೈರಸ್ ಎದುರಿಸಲು ಕೈಗೊಳ್ಳುತ್ತಿರುವ ಕ್ರಮಗಳನ್ನು ಶ್ಲಾಘಿಸಿರುವ ಮೋಹನ್ ಅವರು, ರಾಜ್ಯ ಸರ್ಕಾರ ಈಗಾಗಲೇ 1700 ಹಾಸಿಗೆಗಳನ್ನೊಳಗೊಂಡ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಸಮುಚ್ಚಯವನ್ನು ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ಪ್ರತ್ಯೇಕವಾಗಿರಿಸಿದ್ದು, ಈ ಆಸ್ಪತ್ರೆ ಸಮುಚ್ಚಯಗಳ ತೀವ್ರ ನಿಗಾ ಘಟಕಗಳಲ್ಲಿ ಅತ್ಯಾವಶ್ಯಕವಾಗಿರುವ ವೆಂಟಿಲೇಟರ್ ಸೌಲಭ್ಯ, ಎನ್-95 ರೆಸ್ಪಿರೇಟರ್ಸ್ ಹಾಗೂ ಸರ್ಜಿಕಲ್ ಮಾಸ್ಕ್ ಸೇರಿದಂತೆ ಪರ್ಸನಲ್ ಪ್ರೊಟೆಕ್ಟೀವ್ ಉಪಕರಣಗಳೇ ಮೊದಲಾದ ಅಗತ್ಯ ಪರಿಕರಗಳನ್ನು ತುರ್ತಾಗಿ ಖರೀದಿಸಲು ತಮ್ಮ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ 2 ಕೋಟಿ ರೂ. ನೀಡುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ.