ಮುಂಬೈ, ಮಾ.26 (DaijiworldNews/PY) : ಕೊರೊನಾ ವೈರಸ್ ಹೆಚ್ಚುತ್ತಿರುವ ಹಿನ್ನೆಲೆ ಇಡೀ ದೇಶವನ್ನೇ ಸಂಪೂರ್ಣ ಲಾಕ್ಡೌನ್ ಮಾಡಲಾಗಿದ್ದು, ಈ ಸಂದರ್ಭ ಕಾರು ಉತ್ಪಾದನೆಯನ್ನು ಸ್ಥಗಿತಗೊಳಿಸಿರುವ ಆಟೋ ಉತ್ಪಾದನಾ ಕಂಪೆನಿಗಳು ವೈರಸ್ ವಿರುದ್ದದ ಹೋರಾಟಕ್ಕೆ ವೈದ್ಯಕೀಯ ಉಪಕರಣ ಉತ್ಪಾದನೆನೊಂದಿಗೆ ಸರ್ಕಾರದೊಂದಿಗೆ ಕೈಜೋಡಿಸಿವೆ.
ಇದೀಗ ದೇಶದ ಪ್ರಮುಖ ಕಾರು ಉತ್ಪಾದನಾ ಕಂಪನಿಗಳಲ್ಲಿ ಒಂದಾಗಿರುವ ಮಹೀಂದ್ರಾ ಕೂಡಾ ಕಾರು ಉತ್ಪಾದನೆ ಸ್ಥಗಿತಗೊಂಡಿರುವ ಹಿನ್ನೆಲೆ ವೆಂಟಿಲೇಟರ್ಗಳ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದ್ದು, ಕೇವಲ 48 ಗಂಟೆಗಳಲ್ಲಿ ಆಧುನಿಕ ತಂತ್ರಜ್ಞಾನ ಪ್ರೇರಣೆಯ ಮೂರು ವೆಂಟಿಲೆಟರ್ ಮಾದರಿಗಳ ಪೋಟೋಟೈಪ್ ಮಾದರಿಗಳನ್ನು ಅಭಿವೃದ್ದಿಗೊಳಿಸಿ ಬಹಿರಂಗಪಡಿಸಿದೆ. ಅತ್ಯುತ್ತಮ ಗುಣಮಟ್ಟದೊಂದಿಗೆ ಬೆಲೆಯಲ್ಲೂ ಗಮನಸೆಳೆಯಲಿದ್ದು, ಬೆಲೆ ಮಾಹಿತಿಯನ್ನು ಕೂಡಾ ಹಂಚಿಕೊಳ್ಳಲಾಗಿದೆ.
ಸಾಮಾನ್ಯವಾಗಿ ಪ್ರಸ್ತುತ ಮಾರುಕಟ್ಟೆಯಲ್ಲಿ ಒಂದು ವೆಂಟಿಲೆಟರ್ ಬೆಲೆಯು ರೂ.5 ಲಕ್ಷದಿಂದ ರೂ.7 ಲಕ್ಷ ಬೆಲೆ ಹೊಂದಿದ್ದು, ದೇಶದ ಬಹುತೇಕ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಸೌಲಭ್ಯವು ಸೀಮಿತ ಸಂಖ್ಯೆಯಲ್ಲಿದೆ.
ಆದರೆ ಮಹೀಂದ್ರಾ ಆ್ಯಂಡ್ ಮಹೀಂದ್ರಾ ಕಂಪನಿಯ ಅಧ್ಯಕ್ಷರಾಗಿರುವ ಆನಂದ್ ಮಹೀಂದ್ರಾ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಕೇವಲ 48 ಗಂಟೆಗಳಲ್ಲಿ ಸಿದ್ದಗೊಂಡಿರುವ ಈ ಹೊಸ ವೆಂಟಿಲೇಟರ್ಗಳ ಬೆಲೆಯು ಕೇವಲ ರೂ.7,500ಕ್ಕಿಂತಲೂ ಕಡಿಮೆ ಬೆಲೆ ಪಡೆದುಕೊಂಡಿವೆ ಎಂದು ತಿಳಿಸಿದ್ದಾರೆ.
ದೀರ್ಘ ಬಾಳಕೆಯ ವೆಂಟಿಲೆಟರ್ಗಳಿಂತಲೂ ಮಹೀಂದ್ರಾ ಉತ್ಪಾದನೆ ಮಾಡುತ್ತಿರುವ ವೆಂಟಿಲೇಟರ್ಗಳು ಗಾತ್ರದಲ್ಲಿ ತುಸು ಕಡಿಮೆ ಸಾಮರ್ಥ್ಯವನ್ನು ಹೊಂದಿರಲಿದ್ದು, ಇವುಗಳನ್ನು ತುರ್ತ ಸಂದರ್ಭದಲ್ಲಿ ಸಾಕಷ್ಟು ಅನುಕೂಲಕರವಾಗಲಿವೆ. ಜೊತೆಗೆ ಕೈಗೆಟುಕುವ ಬೆಲೆಗೆ ಲಭ್ಯವಾಗಲಿರುವ ಈ ವೆಂಟಿೇಲೆಟರ್ಗಳನ್ನು ಮನೆಗಳಲ್ಲಿರುವ ದೀರ್ಘ ಕಾಲದ ರೋಗಿಗಳ ಆರೈಕೆಗೂ ಕೂಡಾ ಬಳಕೆ ಮಾಡಬಹುದಾಗಿದ್ದು, ಕೇವಲ 5ರಿಂದ 7 ಕೆ.ಜಿ ತೂಕವನ್ನು ಹೊಂದಿರಲಿವೆ.
ಮಹಿಂದ್ರಾ ಕಂಪೆನಿಯು ಪೋಟೋಟೈಪ್ ಮಾದರಿಗಳನ್ನು ಸದ್ಯ ಅನಾವರಣಗೊಳಿಸಲಿದ್ದು, ಸರ್ಕಾರದಿಂದ ಶೀಘ್ರವೇ ಅನಮೋದನೆ ತೆಗೆದುಕೊಳ್ಳಲಿದ್ದು, ಅಗತ್ಯವಿರುವ ರಾಜ್ಯಗಳಿಗೆ ಪೂರೈಕೆಯನ್ನು ಪ್ರಾರಂಭಿಸಲಿದೆ.
ಈಗಾಗಲೇ ಕೊರೊನಾ ವೈರಸ್ ತಡೆಗಾಗಿ ವಿಶ್ವದ ಎಲ್ಲಾ ರಾಷ್ಟ್ರಗಳು ಒಗ್ಗಟ್ಟಿನಿಂದ ಹೋರಾಟ ನಡೆಸುತ್ತಿದ್ದು, ವೈದ್ಯಕೀಯ ಉಪಕರಣಗಳ ಕೊರತೆ ಎದ್ದುಕಾಣುತ್ತಿದೆ. ಹಾಗಾಗಿ ಆಟೋ ಉತ್ಪಾದನಾ ಘಟಕಗಳಲ್ಲಿ ಇದೀಗ ವೈದ್ಯಕೀಯ ಉಪಕರಣಗಳ ಉತ್ಪಾದನೆಗೆ ತೀರ್ಮಾನಿಸಲಾಗಿದ್ದು, ಪ್ರಮುಖ ಕಾರು ಕಂಪೆನಿಗಳು ವೆಂಟಿಲೇಟರ್ ಹಾಗೂ ಮಾಸ್ಕ್ ಉತ್ಪಾದನೆಗೆ ಒಪ್ಪಿಗೆ ಸೂಚಿಸಿವೆ.
ದಕ್ಷಿಣ ಕೊರಿಯಾದ ಕಿಯಾ ಮೋಟಾರ್ಸ್ ಕೂಡಾ ಮಹತ್ವದ ತೀರ್ಮಾನವೊಂದನ್ನು ಪ್ರಕಟಿಸಿದ್ದು, ಶೀಘ್ರದಲ್ಲೇ 1 ಮಿಲಿಯನ್(10 ಲಕ್ಷ) ಫೇಸ್ ಮಾಸ್ಕ್ಗಳನ್ನು ಅಭಿವೃದ್ದಿಪಡಿಸಿ ಕೊಡುವುದಾಗಿ ಹೇಳಿಕೊಂಡಿದೆ.