ಬೆಂಗಳೂರು, ಮಾ 26 (DaijiworldNews/SM): ದೇಶದೆಲ್ಲೆಡೆ ಲಾಕ್ ಡೌನ್ ಆದೇಶವನ್ನು ಪ್ರಧಾನಿ ಮೋದಿ ಕಟ್ಟುನಿಟ್ಟಾಗಿ ಜಾರಿಗೆ ತಂದಿದ್ದಾರೆ. ಎಲ್ಲಾ ರಾಜ್ಯ ಸರಕಾರಗಳು ಪಾಲಿಸುವಂತೆ ಸೂಚನೆ ನೀಡಿದ್ದಾರೆ. ಈ ನಡುವೆ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಸಿಎಂ ಬಿ.ಎಸ್. ವೈ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ದಿನನಿತ್ಯ ಬಳಸುವ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಕಂಡುಬಂದರೆ ಅಂತವರ ವಿರುದ್ದ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಆದೇಶ ನೀಡಿದ್ದಾರೆ.
ಇನ್ನು ರಾಜ್ಯದಲ್ಲಿ ಖಾಸಗಿ ಕ್ಲಿನಿಕ್ ಗಳು ಬಂದ್ ಮಾಡುವ ಹಾಗಿಲ್ಲ. ಕ್ಲಿನಿಕ್ ಬಂದ್ ಮಾಡುವವರ ವಿರುದ್ದ ಕ್ರಮಕೈಗೊಳ್ಳುತ್ತೇವೆ. ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆಯಂತೆ 21 ದಿನಗಳ ಲಾಕ್ ಡೌನ್ ಆದೇಶದಲ್ಲಿದೆ. ಇದನ್ನು ರಾಜ್ಯದಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ. ಎಲ್ಲಾ ಜಿಲ್ಲಾಧಿಕಾರಿಗಳು ತಮ್ಮ ತಮ್ಮ ಜಿಲ್ಲೆಗಳಲ್ಲೂ ಸಮರ್ಪಕವಾಗಿ ಜಾರಿಗೆ ತರುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ.
ಲಾಕ್ ಡೌನ್ ಆದೇಶವನ್ನು ಮೀರಿ ಹೊರಬಂದವರನ್ನು ಬಂಧಿಸಿ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಎಲ್ಲಾ ಜಿಲ್ಲೆಯ ಗಡಿಗಳನ್ನು ಸೀಲ್ ಮಾಡುವಂತೆ, ವಿಶೇಷವಾಗಿ ಕಾಸರಗೋಡು ಮೂಲಕ ಬರುವವರ ಮೇಲೆ ತೀವ್ರ ನಿಗಾ ಇಡುವಂತೆ ಸೂಚನೆ ನೀಡಿದ್ದಾರೆ.