ಬೆಂಗಳೂರು, ಮಾ 26 (DaijiworldNews/SM): ದೇಶದೆಲ್ಲೆಡೆ ವಕ್ಕರಿಸಿಕೊಂಡಿರುವ ಮಹಾಮಾರಿ ಕೊರೊನಾ ನಿಯಂತ್ರಣಕ್ಕೆ ರಾಜ್ಯದಲ್ಲೂ ಸಾಕಷ್ಟು ಕ್ರಮಕೈಗೊಳ್ಳಲಾಗುತ್ತಿದೆ. ಪೊಲೀಸ್ ಇಲಾಖೆ ಕೂಡ ಎಲ್ಲಾ ರೀತಿಯಲ್ಲಿ ತಮ್ಮ ಜವಾಬ್ದಾರಿ ನಿರ್ವಹಿಸುತ್ತಿದೆ. ಹೀಗಿರುವಾಗಲೂ ಡಿಸಿಎಂ ಅಶ್ವಥ್ ನಾರಾಯಣ ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರನ್ನು ತರಾಟೆಗೆತ್ತಿಕೊಂಡು ಏಕವಚನದಲ್ಲಿ ಮಾತನಾಡಿಸಿದ್ದಾರೆ ಎಂದು ವರದಿಯಾಗಿದೆ.
ಮಹಾಮಾರಿ ಕೊರೋನಾ ವೈರಸ್ ನಿಯಂತ್ರಣ ಸಂಬಂಧ ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಸಭೆ ನಡೆಸಲಾಗಿತ್ತು. ಈ ಸಭೆಯಲ್ಲಿ ಪಾಸ್ ವಿತರಣೆ ಸಂಬಂಧ ಡಿಸಿಎಂ ಅಶ್ವಥ ನಾರಾಯಣ ಹಾಗೂ ಪೊಲೀಸ್ ಆಯುಕ್ತರ ನಡುವೆ ಮಾತಿನ ಚಕಮಿಕಿ ನಡೆದಿದೆ. ಆನ್ ಲೈನ್ ಫುಡ್ ಡೆಲಿವಿರಿ ಕಂಪನಿಯ ಸಿಬ್ಬಂದಿಗೆ ಹೆಚ್ಚು ಪಾಸ್ ನೀಡುವಂತೆ ಅಶ್ವಥ್ ನಾರಾಯಣ ಕೇಳಿದ್ದಾರೆ. ಆದರೆ ಇದಕ್ಕೆ ಭಾಸ್ಕರ್ ರಾವ್ ನಿರಾಕರಿಸಿದ್ದಾರೆ. ಇದುವೇ ಡಿಸಿಎಂ ಅವರ ಕೋಪಕ್ಕೆ ಕಾರಣ ಎನ್ನಲಾಗಿದ್ದು, ಏಕವಚನದಲ್ಲಿ ಮಾತನಾಡಿದ್ದಾರೆ ಎಂದು ವರದಿಯಾಗಿದೆ.
ಬಳಿಕ ಸಭೆಯಿಂದ ಅರ್ಧದಲ್ಲೇ ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಕಣ್ಣೀರಿಡುತ್ತಾ ಹೊರ ನಡೆದ ಪ್ರಸಂಗ ನಡೆದಿದೆ. ಸ್ವತಃ ಸಿಎಂ ಅವರೇ ಪೊಲೀಸ್ ಆಯುಕ್ತರನ್ನು ಮನವೊಲಿಸಲು ಯತ್ನಿಸಿದರಾದರೂ ಅವರು ಅಲ್ಲಿ ನಿಲ್ಲದೆ ಹೊರ ನಡೆದರು.