ತಿರುವನಂತಪುರ, ಮಾ.27 (Daijiworld News/MB) : ವಿದೇಶದಿಂದ ಬಂದ ಮೇಲೆ ಕ್ವಾರೆಂಟೈನ್ ಆಗಿರಬೇಕು ಎಂದಿರುವ ನಿಯಮವನ್ನು ಉಲ್ಲಂಘಿಸಿದ ವ್ಯಕ್ತಿಗೆ ಸೋಂಕು ಇರುವುದು ದೃಢಪಟ್ಟಿದ್ದು ಇದೀಗ 300 ಜನರಿಗೆ ಸೋಂಕು ಭೀತಿ ಎದುರಾಗಿದ್ದಿ ಇವರೆಲ್ಲರೂ ಈಗ ಕ್ವಾರಂಟೈನ್ನಲ್ಲಿ ಉಳಿಯಬೇಕಾಗಿದೆ.
ಉಮ್ರಾ ಯಾತ್ರೆ ಮುಗಿಸಿ ಮಾರ್ಚ್ 13ರಂದು ಪಾಲಕ್ಕಾಡ್ ಜಿಲ್ಲೆಯ ವ್ಯಕ್ತಿ ವಾಪಾಸ್ ಆಗಿದ್ದರು. ಆದರೆ ಪ್ರತ್ಯೇಕವಾಗಿ ಇರಬೇಕಾಗಿದ್ದ ಇವರು ಪುತ್ರನ ಸಂಪರ್ಕದಲ್ಲಿದ್ದರು. ಅವರ ಪುತ್ರ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸಿನಲ್ಲಿ ನಿರ್ವಾಹಕರಾಗಿದ್ದು ಈ ಬಸ್ಸು ಕೊಚ್ಚಿ, ತಿರುವನಂತಪುರ ಸೇರಿದಂತೆ ಐದು ಜಿಲ್ಲೆಗಳ ಮೂಲಕ ಹಾದುಹೋಗುತ್ತದೆ ಎಂದು ಜಿಲ್ಲಾಧಿಕಾರಿ ಡಿ. ಬಾಲಮುರಳಿ ತಿಳಿಸಿದ್ದಾರೆ.
ಬುಧವಾರ ಈ ವ್ಯಕ್ತಿಗೆ ಕೊರೊನಾ ತಗುಲಿರುವುದು ದೃಢಪಟ್ಟಿತ್ತು.
ಇತ್ತೀಚೆಗೆ ಇಂತಹದ್ದೇ ಸಮಸ್ಯೆ ಕಾಸರಗೋಡು ಮತ್ತು ಪತ್ತನಂತಿಟ್ಟ ಜಿಲ್ಲೆಗಳಲ್ಲಿಯೂ ಉಂಟಾಗಿತ್ತು.
ಸೋಂಕು ಪೀಡಿತ ವ್ಯಕ್ತಿ ಪಾಲಕ್ಕಾಡ್ ಸಮೀಪದ ಕರಕ್ಕುರುಸ್ಸಿಯವರಾಗಿದ್ದಾರೆ. ಸ್ಥಳೀಯರ ಪ್ರಕಾರ, ಇವರು ಮಸೀದಿಯಲ್ಲಿ ಪ್ರಾರ್ಥನೆಗೂ ತೆರಳಿದ್ದರು. ಅನೇಕ ಅಂಗಡಿಗಳಿಗೆ, ಸ್ಥಳೀಯ ಸರ್ಕಾರಿ ಆಸ್ಪತ್ರೆಗೂ ಭೇಟಿ ನೀಡಿದ್ದರು ಎಂದು ಹೇಳಲಾಗಿದೆ.
ಇತ್ತೀಚೆಗೆ ಇವರ ಬಗ್ಗೆ ಸ್ಥಳೀಯರು ಆರೋಗ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದ ಆ ಬಳಿಕ ಪ್ರತ್ಯೇಕವಾಗಿ ಇರಿಸಲಾಗಿತ್ತು.