ಬೆಂಗಳೂರು, ಮಾ.27 (Daijiworld News/MB) : ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ರಾಜ್ಯ ಸರಕಾರಕ್ಕೆ ತುರ್ತು ಕೈಗೊಳ್ಳಬೇಕಾದ 20 ಕ್ರಮಗಳ ಕುರಿತು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆಯಲ್ಲಿ ಸಿದ್ದರಾಮಯ್ಯ ತಿಳಿಸಿದ್ದು ಕೇಂದ್ರ ಸರಕಾರ ವಿಳಂಬವಾಗಿಯಾದರೂ ಕೂಲಿ ಕಾರ್ಮಿಕರು, ರೈತರ ನೆರವಿಗೆ ಸ್ಪಂದಿಸಿರುವುದು ಸ್ವಾಗತಾರ್ಹ. ಜ.30ರಂದೇ ಕೊರೊನಾ ಕುರಿತಾಗಿ ರಾಹುಲ್ ಗಾಂಧಿ ಎಚ್ಚರಿಕೆ ನೀಡಿದ್ದರು. ಆದರೆ ಆಗ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಅದರ ಪರಿಣಾಮ ಇಂದು ಈಗಿನ ಗಂಭೀರ ಸ್ಥಿತಿಗೆ ಕಾರಣ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ಪ್ರಕಟ ಮಾಡಿರುವ ಯೋಜನೆಗಳು ಕೂಡಲೇ ಜಾರಿಗೆ ತರಲು ಸಮರೋಪಾದಿಯಲ್ಲಿ ಕೆಲಸ ಮಾಡಬೇಕು. ಆಟೋ, ಟ್ಯಾಕ್ಸಿ, ಖಾಸಗಿ ಬಸ್ ಚಾಲಕರು ಮತ್ತು ಸಿಬ್ಬಂದಿ ಹಾಗೂ ಬಂದ್ ಆಗಿರುವ ಹೊಟೇಲ್, ಮಾಲ್, ಚಿತ್ರ ಮಂದಿರಗಳ ಸಿಬ್ಬಂದಿ, ಡೆಲವರಿ ಬಾಯ್ಗಳು ಕೆಲಸವಿಲ್ಲದೆ ಕಷ್ಟದಲ್ಲಿದ್ದಾರೆ. ಗಾರ್ಮೆಂಟ್ ಫ್ಯಾಕ್ಟರಿ ಸೇರಿದಂತೆ ಸಣ್ಣ ಕೈಗಾರಿಕೆಗಳು ಮುಚ್ಚುವ ಇವರೆಲ್ಲರ ಉದ್ಯೋಗದಾತರು ಸಂಬಳ ಸಹಿತ ರಜೆ ನೀಡಬೇಕು.
ಸಣ್ಣ ವ್ಯಾಪಾರಿಗಳು, ಆಡೋ ಮತ್ತು ಟ್ಯಾಕ್ಸಿ ಚಾಲಕರು ಬ್ಯಾಂಕುಗಳಿಂದ ಸಾಲ ಪಡೆದಿದ್ದಾರೆ. ಬಂದ್ ಕಾರಣದಿಂದಾಗಿ ಅವರಿಗೆ ಉದ್ಯೋಗವಿಲ್ಲ. ಅವರ ಸಾಲವನ್ನು ಭಾಗಶಃ ಮನ್ನಾ ಮಾಡಿ ಮೂರು ತಿಂಗಳ ಇಎಂಐ ಪಾವತಿಯನ್ನು ಮುಂದೂಡಿಕೆ ಮಾಡಬೇಕು.
ಅಸಂಘಟಿತ ವಲಯದಲ್ಲಿರುವ ಕಾರ್ಮಿಕರ ಬದುಕು ಇನ್ನಷ್ಟು ಕಷ್ಟದಲ್ಲಿದೆ. ಈ ಬಗ್ಗೆ ಕಾರ್ಮಿಕ ಇಲಾಖೆ ತುರ್ತಾಗಿ ಗಮನ ಹರಿಸಬೇಕು.
ಮಹಿಳೆಯರ ಜನಧನ್ ಖಾತೆಗೆ 500 ರೂ.ಗಳು ನೀಡುವಂತೆಯೇ ಪುರುಷರಿಗೂ ಈ ಸೌಲಭ್ಯವನ್ನು ವಿಸ್ತರಿಸಬೇಕು. ಕಿಸಾನ್ ಸಮ್ಮಾನ್ ಯೋಜನೆಯನ್ನು ವಿಸ್ತರ ಮಾಡಬೇಕು.
ಹಾಗೆಯೇ ಆಹಾರ ಮತ್ತು ಇತರ ಅಗತ್ಯ ಸಾಮಾಗ್ರಿಗಳ ಮೇಳಿನ ಜಿಎಸ್ಟಿಯನ್ನು ಮುಂದಿನ ಮೂರು ತಿಂಗಳುಗಳ ಕಾಲ ಕನಿಷ್ಠ ಶೇ. 5 ರಷ್ಟು ಕಡಿತ ಮಾಡಬೇಕು.
ಹಲವರು ಊರಿಗೆ ಹೋಗಲಾಗದೇ ಅನಿವಾರ್ಯವಾಗಿ ಬೆಂಗಳೂರಿನಲ್ಲಿ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಉಳಿದುಕೊಂಡಿರುವವರಿಗಾಗಿ ಆಶ್ರಯ ತಾಣಮಾಡಬೇಕು ಹಾಗೂ ಊಟ ತಿಂಡಿ ವ್ಯವಸ್ಥೆ ಮಾಡಬೇಕು.
ರಾಜ್ಯದಲ್ಲಿ 2 - 3 ಜಿಲ್ಲೆಗಳಿಗೆ ಒಂದರಂತೆ, ಅದರಲ್ಲಿಯೂ ಮುಖ್ಯವಾಗಿ ಉತ್ತರ ಕರ್ನಾಟಕದಲ್ಲಿ ಕೊರೊನಾ ಪರೀಕ್ಷಾ ಲ್ಯಾಬ್ಗಳನ್ನು ಆರಂಭಿಸಬೇಕು. ಎಲ್ಲಾ ಜಿಲ್ಲೆಗಳಲ್ಲಿ ಕಫದ ಮಾದರಿ ಸಂಗ್ರಹ ಕೇಂದ್ರಗಳನ್ನು ತೆರರಯಬೇಕು. ಐಸೋಲೇಷನ್ ಕೇಂದ್ರಗಳು ಮತ್ತು ಕೃತಕ ಉಸಿರಾಟದ ವ್ಯವಸ್ಥೆಯನ್ನು ಹೆಚ್ಚಳ ಮಾಡಬೇಕು.
ರಾಜ್ಯದಲ್ಲಿ ಖಾಸಗಿ ಆಸ್ಪತ್ರೆಗಳನ್ನು ಬಳಕೆ ಮಾಡಬೇಕಾಗಿದೆ.. ಕೆಲವು ಆಸ್ಪತ್ರೆಗಳು ಕೊರೊನಾ ಚಿಕಿತ್ಸೆಗೆ ನಿರಾಕರಿಸುತ್ತಿದ್ದು ಅಂತಹ ಖಾಸಗಿ ಆಸಪತ್ರೆಗೆಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಹಾಗೆಯೇ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಸೋಂಕಿತರ ಚಕಿತ್ಸಾ ವೆಚ್ಚವನ್ನು ಸರ್ಕಾರವೇ ಪಾವತಿಸಬೇಕು.
ಎಲ್ಲಾ ಕಡೆಗಳಲ್ಲಿ ಕಂಟ್ರೋಲ್ ರೂಂಗಳನ್ನು ತೆರೆಯಬೇಕು. ಅಂಗನವಾಡಿ ಕೇಂದ್ರದ ಫಲಾನುಭವಿಗಳಿಗೆ ನೀಡುವ ಪೌಷ್ಠಿಕ ಆಹಾರ ನೀಡುವ ಕುರಿತು ನಿರ್ಧಾರ ಕೈಗೊಳ್ಳಬೇಕು. ಇನ್ನು ಹಲವಾರು ಸೂಚನೆ ಹಾಗೂ ಒತ್ತಾಯವನ್ನು ಮಾಡಿದ್ದಾರೆ.