ನವದೆಹಲಿ, ಮಾ 27 (Daijiworld News/MSP): ಕೊರೊನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ 21 ದಿನಗಳ ಲಾಕ್ಡೌನ್ ಘೋಷಿಸಲಾಗಿದೆ. ಈ ನಡುವೆ ಮಾ. 31ರವರೆಗೆ ನಿಷೇಧ ಹೇರಲಾಗಿದ್ದ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ನಿರ್ಬಂಧದ ದಿನಾಂಕವನ್ನು ಏ. 14ರವರೆಗೂ ವಿಸ್ತರಿಸಲಾಗಿದೆ ಎಂದು ಭಾರತದ ನಾಗರಿಕ ವಿಮಾನಯಾನ ಸಚಿವಾಲಯ ಪ್ರಕಟಣೆ ಹೊರಡಿಸಿದೆ.
ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸುತ್ತಿದೆ. ಕೊರೊನಾ ವೈರಸ್ ಪ್ರಕರಣಗಳೂ ಹೊರದೇಶಗಳಿಂದ ಆಗಮಿಸಿದವರಿಂದಲೇ ಹರಡಿರುವ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನಗಳಿಗೆ ಭಾರತದ ಗಡಿಯಲ್ಲಿ ನಿಷೇಧ ಹೇರಲು ನಿರ್ಧರಿಸಲಾಗಿತ್ತು.
ವಿದೇಶಗಳಿಂದ ಭಾರತಕ್ಕೆ ಆಗಮಿಸುವ ಮತ್ತು ಭಾರತದಿಂದ ವಿದೇಶಗಳಿಗೆ ತೆರಳುವ ಎಲ್ಲ ಪ್ರಯಾಣಿಕ ವಿಮಾನಗಳನ್ನು ಏ. 14ರವರೆಗೆ ನಿಷೇಧಿಸಲಾಗಿದೆ. ಇನ್ನು ಅನುಮತಿ ಪಡೆದ ಎಲ್ಲ ಅಂತಾರಾಷ್ಟ್ರೀಯ ಸರಕು ವಿಮಾನಗಳಿಗೆ ಇದು ಅನ್ವಯಿಸುವುದಿಲ್ಲ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಇದೇ ರೀತಿ ಆಸ್ಟ್ರೇಲಿಯ ಮತ್ತು ನ್ಯೂಜಿಲೆಂಡ್ ನಲ್ಲಿ ಕೂಡ ಅಂತಾರಾಷ್ಟ್ರೀಯ ವಿಮಾನಗಳ ಮೇಲೆ ನಿರ್ಬಂಧ ಹೇರಲಾಗಿದೆ.