ಬೆಂಗಳೂರು, ಮಾ.27 (Daijiworld News/MB) : ಎಂಜಿನಿಯರ್ ವಿದ್ಯಾರ್ಥಿಯೊಬ್ಬ "ನನಗೆ ಕೊರೊನಾ ಇದೆ. ಮುಟ್ಟಿದ್ರೆ ನಿಮಗೂ ಬರುತ್ತೆ. ಧಮ್ಮಿದ್ರೆ ಮುಟ್ಟಿ" ಎಂದು ಪೊಲೀಸರನ್ನು ಬೆದರಿಸಿ ಅಸ್ವಸ್ಥನಂತೆ ವರ್ತನೆ ಮಾಡುತ್ತಿದ್ದು ಆತನನ್ನು ವಶಕ್ಕೆ ಪಡೆದ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಘಟನೆ ಬುಧವಾರ ರಾತ್ರಿ ಯಶವಂತಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು ಪೊಲೀಸರು ಗಸ್ತು ತಿರುಗುತ್ತ ಕೊರೊನಾ ವೈರಾಣು ಹರಡುವಿಕೆ ತಡೆಯುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದರು. ಈ ಸಂದರ್ಭದಲ್ಲಿ ಯಶವಂತಪುರದ 1ನೇ ಮುಖ್ಯರಸ್ತೆಯಲ್ಲಿ ನಿಂತಿದ್ದ ಯುವಕ, "ನನಗೂ ಕೊರೊನಾ ಇದೆ. ಧಮ್ಮಿದ್ರೆ ನನ್ನನ್ನು ಮುಟ್ಟಿ" ಎಂದು ಕೂಗಾಡಿದ್ದ.
ಪೊಲೀಸರು ಹತ್ತಿರ ಹೋದ ಸಂದರ್ಭದಲ್ಲಿ ಹತ್ತಿರ ಬರಬೇಡಿ. ಮುಟ್ಟಬೇಡಿ. ನಿಮಗೂ ಕೊರೊನಾ ಬರುತ್ತೆ ಎಂದು ಹೆದರಿಸಿದ್ದ.
ಬಳಿಕ ಪೊಲೀಸರು ಯುವಕನನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ತಪಾಸಣೆಗೆ ಒಳಪಡಿಸಿದರು. ಈ ಸಂದರ್ಭದಲ್ಲಿ ಆತ ಮಾದಕ ದ್ರವ್ಯ ಸೇವಿಸಿದ್ದ ಎಂದು ತಿಳಿದು ಬಂದಿದೆ.
ಈ ಕುರಿತಾಗಿ ಪ್ರತಿಕ್ರಿಯೆ ನೀಡುರುವ ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್, ಆತ ಮಾನಸಿಕವಾಗಿ ಅಸ್ವಸ್ಥನಂತೆ ವರ್ತಿಸಿದ್ದ. ಸದ್ಯ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.