ಬೆಂಗಳೂರು, ಮಾ.27 (DaijiworldNews/PY) : ದೇಶಾದ್ಯಂತ ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ 21 ದಿನಗಳ ಲಾಕ್ಡೌನ್ ಘೋಷಿಸಿರುವ ಹಿನ್ನೆಲೆ ವಲಸೆ ಕಾರ್ಮಿಕರು, ದಿನಗೂಲಿ ಕಾರ್ಮಿಕರು, ಬಡ ನಿರ್ಗತಿಕರ ಆಹಾರ ಭದ್ರತೆಗೆ ಸಂಬಂಧಿಸಿ ಹೈಕೋರ್ಟ್ ಹಾಗೂ ಕಾನೂನು ಸೇವಾ ಪ್ರಾಧಿಕಾರಕ್ಕೆ ಸಲ್ಲಿಕೆಯಾಗಿರುವ ಮನವಿಗಳನ್ನು ಪರಿಗಣಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಈ ವಿಚಾರವಾಗಿ ಮುಖ್ಯ ನ್ಯಾಯಮೂರ್ತಿಯವರಿಗೆ ಪಿಯುಸಿಎಲ್ ಅಧ್ಯಕ್ಷರು ಮಾಡಿರುವ ಇ-ಮೇಲ್, ಎಐಟಿಯುಸಿ ಸೇರಿದಂತೆ ವಿವಿಧ ಸಂಘಟನೆಗಳು ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಿಗೆ ಬರೆದ ಪತ್ರಗಳು, ಬಿಬಿಎಂಪಿ ಪೌರಕಾರ್ಮಿಕರ ಸಂಘ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗೆ ಬರೆದ ಪತ್ರಗಳನ್ನು ಆಧರಿಸಿ ತುರ್ತು ವಿಚಾರಣೆಗೆ ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ಹಾಗೂ ನ್ಯಾ. ಬಿ.ವಿ. ನಾಗರತ್ನ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ನಿರ್ದೇಶನವನ್ನು ನೀಡಿದೆ.
ಈ ಮೂರು ಪತ್ರಗಳನ್ನು ಹೈಕೋರ್ಟ್ ಹಾಗೂ ಕಾನೂನು ಸೇವಾ ಪ್ರಾಧಿಕಾರಕ್ಕೆ ಬರೆಯಲಾಗಿದ್ದು ಹಾಗೂ ಇ-ಮೇಲ್ ಮೂಲಕ ಸಂಧ್ಯಾ. ಯು. ಅವರ ಉ ಸಲ್ಲಿಸಿರುವ ಅರ್ಜಿಯನ್ನು ಅಡ್ವೋಕೇಟ್ ಜನರಲ್ ಹಾಗೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಇ-ಮೇಲ್ ಅಥ್ವಾ ವಾಟ್ಸಪ್ ಮುಖಾಂತರ ರವಾಸಿಸುವಂತೆ ನ್ಯಾಯಪೀಠ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ಗೆ ನಿರ್ದೇಶನ ನೀಡಿತು.
ಅದಲ್ಲದೇ, ಈ ಮೂರು ಪತ್ರಗಳು ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟಲು ಕ್ರಮಗಳನ್ನು ಕೈಗೊಳ್ಳುವಂತೆ ಸಲ್ಲಿಸಲಾಗಿರುವ ಪಿಐಎಲ್ಗೆ ಪೂರಕವಾಗಿ ಪರಿಗಣಿಸಲಾಗುವುದು ಎಂದು ನ್ಯಾಯಪೀಠ ತಿಳಿಸಿದೆ.
ಇದೇ ಸಂದರ್ಭ ಮಾ.30ರ ಬೆಳಿಗ್ಗೆ 11 ಗಂಟೆಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸುವುದಾಗಿ ಹೇಳಿರುವ ನ್ಯಾಯಪೀಠ, ಸಂದರ್ಭ ಒದಗಿ ಬಂದರೆ, ಸುಪ್ರೀಕೋರ್ಟ್ ಕೈದಿಗಳ ಕುರಿತು ನೀಡಿರುವ ನಿರ್ದೇಶನಗಳನ್ನು ಪಾಲಿಸಿರುವ ವಿಚಾರದ ಬಗ್ಗೆಯೂ ಪರಿಶೀಲಿಸಲಾಗುವುದು ಎಂದು ನ್ಯಾಯಪೀಠ ಹೇಳಿದೆ.