ಚಿತ್ರದುರ್ಗ, ಮಾ.27 (Daijiworld News/MB) : ಧರ್ಮಸ್ಥಳ, ತಿರುಪತಿ, ಶ್ರೀಶೈಲದಂಥ ತೀರ್ಥ ಕ್ಷೇತ್ರಗಳಲ್ಲಿ ದೀಪ ಆರಿದೆ ಎಂಬ ವದಂತಿ ಚಿತ್ರದುರ್ಗ, ಬಳ್ಳಾರಿ ಜಿಲ್ಲೆಗಳಲ್ಲಿ ಆವರಿಸಿದ್ದು ಮಹಿಳೆಯರು ತಮ್ಮ ಮನೆಗಳ ಎದುರು ರಾತ್ರಿ ದೀಪಗಳನ್ನು ಬೆಳಗಿದ್ದಾರೆ.
ಇನ್ನು ಶ್ರೀಶೈಲದಲ್ಲಿ ದೀಪ ನಂದಿದೆ ಅದ್ದರಿಂದ ತಮ್ಮ ತಮ್ಮ ಮನೆಗಳ ಬಾಗಿಲ ಮುಂದೆ ನಾಲ್ಕು ದೀಪಗಳನ್ನು ಹಚ್ಚಿ ಇಡಬೇಕು ಎಂಬ ವದಂತಿಯು ಕೊಟ್ಟೊರು, ಕೂಡ್ಲಿಗಿಯಲ್ಲಿ ಹರಿದಾಡಿದ್ದು ಇದರಿಂದ ಮಹಿಳೆಯರು ಮನೆಯ ಮುಂದೆ ಕಸ ಗುಡಿಸಿ, ಸೆಗಣಿ ಸಾರಿಸಿ, ರಂಗೋಲಿ ಹಾಕಿ ವೀಳ್ಯದೆಲೆ ಅಥವಾ ಎಕ್ಕೆ ಎಲೆ ಇಟ್ಟು ನಾಲ್ಕು ದೀಪಗಳನ್ನು ಹಚ್ಚುತಿರುವುದು ಕಂಡು ಬರುತ್ತಿದೆ.
ಇನ್ನು ಈ ವದಂತಿಗಳ ಬಗ್ಗೆ ಸ್ಪಷ್ಟನೆ ನೀಡಿರುವ ಶ್ರೀಮಠದ ವಿಚಾರಣ ವಿಭಾಗದ ಸಿಬ್ಬಂದಿ, "ಆ ರೀತಿಯ ಯಾವುದೇ ಅವಘಡ ನಡೆದಿಲ್ಲ. ಎಂದಿನಂತೆ ಶ್ರೀಮಠದಲ್ಲಿ ಪೂಜಾ ಕಾರ್ಯಗಳು ನಡೆದಿದೆ ಎಂದು ತಿಳಿಸಿದ್ದಾರೆ.
ಇನ್ನು ಚಿತ್ರದುರ್ಗದಲ್ಲಿ ಧರ್ಮಸ್ಥಳ ಮತ್ತು ತಿರುಪತಿ ದೇಗುಲದಲ್ಲಿ ದೀಪ ಆರಿ ಹೋಗಿದೆ ವದಂತಿಯಿಂದಾಗಿ ಮಧ್ಯರಾತ್ರಿ ಮನೆ ಅಂಗಳದಲ್ಲಿ ದೀಪ ಹಚ್ಚಲಾಗಿದೆ. ದೇಗುಲದ ದೀಪ ಆರಿ ಹೋಗಿರುವುದು ಅಪಶಕುನದ ಸಂಕೇತ ಎಂಬ ವದಂತಿ ಗ್ರಾಮೀಣ ಪ್ರದೇಶದಲ್ಲಿ ಹಬ್ಬಿದೆ.
ಕಿಡಿಗೇಡಿಗಳು ದೂರವಾಣಿ ಕರೆ ಮಾಡಿ ಜನರಿಗೆ ಸುಳ್ಳು ಮಾಹಿತಿ ನೀಡಿದ್ದಾರೆ. ಮಧ್ಯರಾತ್ರಿ ಎದ್ದು ಮನೆಯಂಗಳ ಸಾರಿಸಿದ ಮಹಿಳೆಯರು ದೀಪ ಹಚ್ಚಿಟ್ಟರು. ದೀಪ ಆರದಂತೆ ನೋಡಿಕೊಂಡರು ಎಂದು ವರದಿ ತಿಳಿಸಿದೆ.