ನವದೆಹಲಿ, ಮಾ 27 (Daijiworld News/MSP): ಕೊರೊನಾ ವೈರಸ್ ಸೋಂಕು ತಡೆಯುವಂತೆ ದೇಶಾದ್ಯಂತ 21 ದಿನಗಳ ಲಾಕ್ಡೌನ್ ಘೋಷಿಸಲಾಗಿರುವ ಹಿನ್ನೆಲೆಯಲ್ಲಿ ರಾಷ್ಟ್ರದಲ್ಲಿ ಉಂಟಾಗಿರುವ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಆರ್ಬಿಐ ರೆಪೋ ದರ ಕಡಿತಗೊಳಿಸಿದೆ. ಮಾತ್ರವಲ್ಲದೆ 3 ತಿಂಗಳು ಇಎಂಐ ಪಾವತಿಸಬೇಕಿಲ್ಲ ಎಂದು ಆರ್ ಬಿಐ ತಿಳಿಸಿದೆ.
ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭಾರತದ ಎಲ್ಲ ಬ್ಯಾಂಕ್ ಗಳಲ್ಲಿ ಪಡೆದ ವೈಯಕ್ತಿಕ ಸಾಲ, ವಾಹನ ಸಾಲ, ಗೃಹ ಸಾಲ ಸೇರಿದಂತೆ ಎಲ್ಲ ರೀತಿಯ ಸಾಲದ ಮೇಲಿನ ಇಎಂಐ ಆರ್ ಬಿಐ. ಮುಂದೂಡಿದೆ ಎಂದು ತಿಳಿಸಿದ್ದು ದೇಶದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಸಮರೋಪಾದಿಯಲ್ಲಿ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.
ಜಾಗತಿಕ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಇಳಿಕೆಯಿಂದ ಭಾರತಕ್ಕೆ ಅನುಕೂಲವಾಗಲಿದೆ. ರೆಪೋ ದರವನ್ನು ಶೇ.5.1ರಿಂದ ಶೇ.4.4ಕ್ಕೆ ಇಳಿಸಲಾಗಿದೆ ಎಂದರು. ಸಣ್ಣ ಉದ್ದಿಮೆಗಳು ಅನುಭವಿಸುತ್ತಿರುವ ನಷ್ಟವನ್ನು ಗಮನಿಸಲಾಗಿದೆ. ಹೀಗಾಘಿ ಸಣ್ಣ ಉದ್ದಿಮೆಗಳನ್ನು ರಕ್ಷಿಸುವ ಉದ್ದೇಶದಿಂದ ಬ್ಯಾಂಕ್ ಗಳ ಸಾಲದ ಮೇಲಿನ ಬಡ್ಡಿದರವನ್ನು ಕಡಿತಗೊಳಿಸಲಾಗಿದೆ .ಕರೊನಾ ವೈರಸ್ ದೇಶಕ್ಕೆ ಕಠಿಣ ಸ್ಥಿತಿಯನ್ನು ತಂದಿದ್ದು, ಇದರ ವಿರುದ್ಧ ನಾವು ಹೋರಾಟ ಮಾಡಬೇಕಿದೆ ಎಂದು ಅವರು ಪತ್ರಿಕಾಗೋಷ್ಟಿಯಲ್ಲಿ ವಿವರಿಸಿದರು.