ಬೆಂಗಳೂರು, ಮಾ.27 (DaijiworldNews/PY) : ರಾಜ್ಯದ ವಸತಿ ಶಾಲೆಗಳನ್ನು ಕೊರೊನಾ ನಿಯಂತ್ರಣಕ್ಕಾಗಿ ಕ್ವಾರಂಟೈನ್ ಕೇಂದ್ರಗಳನ್ನಾಗಿ ಬಳಸಿ ಎಂದು ಉಪಮುಖ್ಯಮಂತ್ರಿ ತಿಳಿಸಿದ್ದಾರೆ.
ಈ ವಿಚಾರವಾಗಿ ಪ್ರಕಟಣೆ ನೀಡಿರುವ ಅವರು, ಕೊರೊನಾ ವೈರಸ್ ಹಿನ್ನೆಲೆ ವಸತಿ ಶಾಲೆಗಳಿಗೆ ರಜೆ ನೀಡಿರುವ ಕಾರಣ ವಸತಿ ಶಾಲೆಗಳಲ್ಲಿ ಯಾವುದೇ ವಿದ್ಯಾರ್ಥಿಗಳಿಲ್ಲ. ರಾಜ್ಯದ ಎಲ್ಲಾ ಜಿಲ್ಲಾ, ತಾಲೂಕುಗಳಲ್ಲಿರುವ ವಸತಿ ಶಾಲೆಗಳು ಹಾಗೂ ವಿದ್ಯಾರ್ಥಿ ನಿಲಯಗಳು ಸುಸಜ್ಜಿತವಾಗಿದ್ದು, ಪ್ರತ್ಯೇಕ ಕೊಠಡಿಗಳು, ಶೌಚಾಲಯ, ಅಡುಗೆ ಮನೆ ಸೇರಿದಂತೆ ಎಲ್ಲಾ ಸೌಕರ್ಯಗಳನ್ನು ಹೊಂದಿದೆ ಎಂದು ಹೇಳಿದ್ದಾರೆ.
ಜನವಸತಿ ಪ್ರದೇಶಗಳಿಂದ ಈ ವಸತಿ ಶಾಲೆಗಳು ದೂರವಿದೆ. ಅವಶ್ಯಕತೆಯಿದ್ದರೆ ಹೆಚ್ಚಿನ ಖರ್ಚಿಲ್ಲದೇ ಕ್ವಾರಂಟೈನ್ ಕೇಂದ್ರಗಳನ್ನಾಗಿ ಪರಿವರ್ತಿಸಬಹುದಾಗಿದೆ. ಜಿಲ್ಲಾಡಳಿತ ವಸತಿ ಶಾಲೆಗಳನ್ನು ಮುಕ್ತವಾಗಿ ಬಳಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.