ಕೊಲ್ಲಂ, ಮಾ 27 (Daijiworld News/MSP): ಕೇರಳದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕಿನ ಪ್ರಕರಣಗಳ ಮಧ್ಯೆ ಕೇರಳದ ಕೊಲ್ಲಂನಲ್ಲಿ ಹೋಂ ಕ್ವಾರಂಟೈನ್ನಲ್ಲಿದ್ದ ಐಎಎಸ್ ಅಧಿಕಾರಿಯೊಬ್ಬರು ಪರಾರಿಯಾದ ಘಟನೆ ನಡೆದಿದೆ.
ಕೊಲ್ಲಂ ಜಿಲ್ಲೆಯ ಸಬ್ ಕಲೆಕ್ಟರ್ ಅನುಪಮ್ ಮಿಶ್ರ ಅವರು ಕಳೆದ ವಾರ ಸಿಂಗಾಪುರದಿಂದ ವಾಪಸಾಗಿದ್ದರು. ಈ ಹಿನ್ನಲೆಯಲ್ಲಿ ಅವರನ್ನು ಹೋಂ ಕ್ವಾರಂಟೈನ್ನಲ್ಲಿ ಇಡಲಾಗಿತ್ತು. ಪ್ರತಿ ನಿತ್ಯ ಸ್ಥಳೀಯ ಆರೋಗ್ಯ ಅಧಿಕಾರಿಗಳು ಅವರ ಆರೋಗ್ಯ ತಪಾಸಣೆ ಮಾಡುತ್ತಿದ್ದರು. ಆದರೆ ಏಕಾಏಕಿ ಅವರು ನಾಪತ್ತೆಯಾಗಿದ್ದರು. ಅವರ ಆರೋಗ್ಯ ತಪಾಸಣೆ ಸಿಬ್ಬಂದಿಗಳು ಹೋದಾಗ ನಾಪತ್ತೆಯಾಗಿರುವ ವಿಚಾರ ತಿಳಿದು ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಮಾರ್ಚ್ 21 ರಂದು ತಮ್ಮ ವಸತಿಗೃಹದಿಂದ ಮಿಶ್ರಾ ತಮ್ಮೂರಾದ ಕಾನ್ಪುರಕ್ಕೆ ತೆರಳಿದ್ದರು. ಆದರೆ ಹೋಂ ಕ್ವಾರಂಟೈನ್ನಿಂದ ಹೊರಹೋಗುವ ಸಂದರ್ಭದಲ್ಲಿ ಕೊಲ್ಲಂ ಜಿಲ್ಲಾಧಿಕಾರಿ ಹಾಗೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಗಮನಕ್ಕೂ ತಂದಿರಲಿಲ್ಲ. ಆರೋಗ್ಯ ಇಲಾಖೆಯ ಅಧಿಕಾರಿಗಳು ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಯಾವುದೇ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಕೊನೆಗೆ ತಾನೇ ಕರೆ ಮಾಡಿ ಕಾನ್ಪುರ ಬಂದಿರುವ ವಿಚಾರ ತಿಳಿಸಿದ್ದರು.
ಕೇರಳ ಸರ್ಕಾರದ ಹಿರಿಯ ವಕ್ತಾರರು ಮಿಶ್ರಾ ನಡವಳಿಕೆಯನ್ನು "ಐಎಎಸ್ ಅಧಿಕಾರಿಯೊಬ್ಬರ ಗಂಭೀರ ನಿರ್ಲಕ್ಷ್ಯ" ಎಂದು ಬಣ್ಣಿಸಿದ್ದಾರೆ. ಮಾತ್ರವಲ್ಲದೆ ಐಎಎಸ್ ಅಧಿಕಾರಿಯ ಈ ಬೇಜಾವಾಬ್ದಾರಿಯುತ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಕೇರಳ ಸರ್ಕಾರದ ಅಧಿಕಾರಿಗಳು ಉತ್ತರಪ್ರದೇಶದಲ್ಲಿರುವ ಅಧಿಕಾರಿಗಳ ಸಂಪರ್ಕದಲ್ಲಿದ್ದಾರೆ ಮತ್ತು ಈ ಎಲ್ಲಾ ಬೆಳವಣಿಗೆಗಳನ್ನು ಕೇಂದ್ರ ಸಿಬ್ಬಂದಿ ಸಚಿವಾಲಯದ ಗಮನಕ್ಕೆ ತರುತ್ತಾರೆ ಎಂದು ವಕ್ತಾರರು ತಿಳಿಸಿದ್ದಾರೆ.
ಅವರ ಕಣ್ಮರೆ ಬೆಳಕಿಗೆ ಬಂದ ನಂತರ ಮಿಶ್ರಾ ಅವರ ಚಾಲಕ, ವೈಯಕ್ತಿಕ ಭದ್ರತಾ ಸಿಬ್ಬಂದಿ ಮತ್ತು ಕಾರ್ಯದರ್ಶಿಯನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಮಾತ್ರವಲ್ಲದೆ ಮಿಶ್ರಾ ಹಾಗೂ ಅವರ ಗನ್ ಮ್ಯಾನ್ ವಿರುದ್ದ ಪ್ರಕರಣ ದಾಖಲಿಸಲಾಗಿದೆ.