ಕೋಲ್ಕತ್ತ, ಮಾ.27 (DaijiworldNews/PY) : ದೇಶಾದ್ಯಂತ ಮಾರಣಾಂತಿಕ ಕೊರೊನಾ ವೈರಸ್ ವ್ಯಾಪಿಸುತ್ತಿದ್ದು, ಇದನ್ನು ನಿಯಂತ್ರಿಸಲು ಲಾಕ್ಡೌನ್ ವಿಧಿಸಲಾಗಿದೆ. ಆದರೆ, ಚಲಾಯಿಸುತ್ತಿದ್ದ ಕಾರನ್ನು ತಡೆದ ಪೊಲೀಸ್ ಅಧಿಕಾರಿಯ ಮೇಲೆ ಮಹಿಳೆಯೋರ್ವರು ಉಗುಳಿದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.
ಕೋಲ್ಕತ್ತಾದ ಸಾಲ್ಟ್ ಲೇಕ್ ಪ್ರದೇಶದಲ್ಲಿ ಕರ್ತವ್ಯ ನಿರತ ಪೊಲೀಸರು ರಸ್ತೆಯಲ್ಲಿ ಅನಗತ್ಯವಾಗಿ ತಿರುಗಾಡುತ್ತಿದ್ದ ಕಾರನ್ನು ತಡೆದು ನಿಲ್ಲಿಸಿ ಪರಿಶೀಲನೆ ನಡೆಸುತ್ತಿದ್ದರು. ಈ ಸಂದರ್ಭ ಕಾರಿನಲ್ಲಿ ಕುಳಿತಿದ್ದ ಮಹಿಳೆಯೋರ್ವರನ್ನು ಪೊಲೀಸರು ಲಾಕ್ಡೌನ್ ಇದ್ದರೂ ಯಾಕೆ ಪ್ರಯಾಣ ಮಾಡುತ್ತೀರಿ ಎಂದು ಪ್ರಶ್ನಿಸಿದ್ದಾರೆ. ನಂತರ ಪೊಲೀಸರೊಂದಿಗೆ ವಾಗ್ವಾದ ನಡೆದಿದ್ದು, ಪೊಲೀಸರನ್ನು ಮಹಿಳೆ ಅವಾಚ್ಯ ಶಬ್ದಗಳಿಂದ ನಿಂಧಿಸಿ ಅಧಿಕಾರಿಯ ಮೇಲೆ ಉಗುಳಿದ್ದು, ನಿನಗೂ ಕೂಡಾ ಈಗ ವೈರಸ್ ಬಂತು ಎಂದು ಹೇಳಿದ್ದಾಳೆ.
ತುರ್ತಾಗಿ ನಾನು ವೈದ್ಯರನ್ನು ಕಾಣಬೇಕಿತ್ತು. ಆದರೆ, ಪೊಲೀಸರು ಅನಗತ್ಯವಾಗಿ ಅಡ್ಡಿಪಡಿಸಿದರು ಎಂದು ಮಹಿಳೆ ಕೂಗಾಡಿದ್ದಾಳೆ. ಇದೀಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಪೊಲೀಸರು ಒಂದೆಡೆ ತಮ್ಮ ಪ್ರಾಣದ ಹಂಗು ತೊರೆದು ರಕ್ಷಣೆಗೆ ನಿಂತಿದ್ದಾರೆ. ಆದರೆ, ಅವರ ಮೇಲೆಯೇ ಮಹಿಳೆ ಈ ರೀತಿಯಾಗಿ ಮಾಡಿದ್ದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.