ಪಲಕ್ಕಾಡ್, ಮಾ.27 (DaijiworldNews/PY) : ವಿಚಾರಣಾಧೀನ ಕೈದಿಯೊಬ್ಬರು ಸ್ಯಾನಿಟೈಜರ್ ಅನ್ನು ಆಲ್ಕೋಹಾಲ್ ಎಂದು ಕುಡಿದು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.
ಫೆ.18ರಿಂದ ವಿಚಾರಾಧೀನ ಕೈದಿಯಾಗಗಿ ಜೈಲಿನಲ್ಲಿದ್ದ ರಮಣ್ಕುಟ್ಟಿ ಎಂಬಾತ ಮಂಗಳವಾರ ಜೈ ಲಿನಲ್ಲಿ ಕುಸಿದು ಬಿದ್ದಿದ್ದರು. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ರಾಜ್ಯ ಸರ್ಕಾರದ ಆದೇಶದಂತೆ ಜೈಲು ಆವರಣದಲ್ಲಿ (ಕೈದಿಗಳಿಂದ) ಸ್ಯಾನಿಟೈಸರ್ ತಯಾರಿಸಲಾಗಿತ್ತು, ಆದರೆ ರಮಣ್ ಕುಟ್ಟಿ ಬಾಟಲಿಯಲ್ಲಿದ್ದ ಸ್ಯಾನಿಟೈಸರ್ ಅನ್ನು ಸೇವಿಸಿದ್ದಾರೆ ಎಂಬ ಅನುಮಾನವಿದೆ ಎಂದು ಜೈಲಿನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ವರದಿ ತಿಳಿಸಿದೆ.
ರಮಣ್ ಕುಟ್ಟಿ ಮಂಗಳವಾರ ರಾತ್ರಿ ಆರಾಮವಾಗಿದ್ದು, ಬುಧವಾರ ರೋಲ್ ಕರೆಗೂ ಹಾಜರಾಗಿದ್ದರು. ಆದರೆ ಬೆಳಗ್ಗೆ 10.30ರ ಸುಮಾರಿಗೆ ಕುಸಿದು ಬಿದ್ದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಐಸೊಪ್ರೊಪಿಲ್ ಆಲ್ಕೋಹಾಲ್ (ರಬ್ಬಿಂಗ್ ಆಲ್ಕೋಹಾಲ್) ಅನ್ನು ಜೈಲಿನ ಅಧಿಕಾರಿಗಳು ಹ್ಯಾಂಡ್ ಸ್ಯಾನಿಟೈಸರ್ ತಯಾರಿಕೆಯಲ್ಲಿ ಪ್ರಮುಖವಾಗಿ ಬಳಸುತ್ತಿದ್ದರು.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸಾವಿಗೆ ನಿಖರ ಕಾರಣ ಮರಣೋತ್ತರ ಪರೀಕ್ಷೆಯ ನಂತರ ತಿಳಿದುಬರಲಿದೆ ಎಂದು ತಿಳಿಸಿದ್ದಾರೆ.