ಮೈಸೂರು, ಮಾ.27 (DaijiworldNews/PY) : "ದಿನಕ್ಕೊಂದು ಆದೇಶವನ್ನು ಸರ್ಕಾರ ಹೊರಡಿಸಬಾರದು. ಇಷ್ಟ ಬಂದಂತೆ ಆದೇಶ ಮಾಡಬಾರದು "ಎಂದು ಮಾಜಿ ಸಚಿವ ಎಚ್ ವಿಶ್ವನಾಥ್ ಅವರು ಸಿಎಂ ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, "ದಿನದ 24 ಗಂಟೆ ದಿನಸಿ ಅಂಗಡಿ ತೆಗೆಯುವ ಬಗ್ಗೆ ಇಷ್ಟಬಂದಂತೆ ಆದೇಶ ಹೊರಡಿಸಬಾರದು. ಕರ್ಪ್ಯೂ ಮ್ಯಾನ್ಯುಯಲ್ ಪಾಲಿಸಬೇಕು. ಸಿಎಂ ಯಡಿಯೂರಪ್ಪ ಹೊರತುಪಡಿಸಿ ಯಾರು ಹೇಳಿಕೆಗಳನ್ನು ನೀಡಬಾರದು" ಎಂದು ತಿಳಿಸಿದ್ದಾರೆ.
"ವಿಪಕ್ಷ ನಾಯಕರನ್ನು ಸಿಎಂ ಬಿಎಸ್ವೈ ಅವರು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಅವರಿಂದ ಕಾಲ ಕಾಲಕ್ಕೆ ಸಲಹೆಗಳನ್ನು ಪಡೆಯಬೇಕು. ಇದು ಜಾಗತಿಕ ಮಹಾಮಾರಿ. ಇದರ ವಿರುದ್ದವಾಗಿ ಸಂಘಟಿತ ಹೋರಾಟ ನಡೆಸಬೇಕು. ಸಚಿವರ ಮಧ್ಯೆ ಹೊಂದಾಣಿಕೆಯ ಕೊರತೆ ಆಗಬಾರದು. ಒಟ್ಟಾಗಿ ಎಲ್ಲರೂ ಕೆಲಸ ಮಾಡಬೇಕು" ಎಂದು ಹೇಳಿದರು.