ಬೆಂಗಳೂರು, ಮಾ 27 (Daijiworld News/MSP): ಕೋವಿಡ್-19 ರ ಸೋಂಕು ವ್ಯಾಪಿಸದಂತೆ ಕಡಿವಾಣ ಹಾಕಲು ಮುನ್ನೆಚ್ಚರಿಕೆ ಕ್ರಮವಾಗಿ ಲಾಕ್ ಡೌನ್ ಮಾಡಿರುವ ಹಿನ್ನೆಲೆಯಲ್ಲಿ ಇಡೀ ದೇಶವೇ ಸ್ಥಬ್ದಗೊಂಡಿದೆ. ಆದರೆ, ಕರ್ನಾಟಕದ ಕೆಲವೆಡೆಗಳಲ್ಲಿ ಮಾತ್ರ ಜನರ ಓಡಾಟ ಎಂದಿನಂತೆ ಕಾಣಿಸಿಕೊಂಡಿದೆ. ಈ ಬಗ್ಗೆ ಗಮನಹರಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಬಂದೋಬಸ್ತ್ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಶುಕ್ರವಾರ ಬೆಳಿಗ್ಗೆ ದೂರವಾಣಿ ಮೂಲಕ ಮಾತನಾಡಿ ಸಲಹೆ ನೀಡಿದ್ದಾರೆ.
ರಾಜ್ಯದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ವಿಧಾನ ಸೌಧದ ಸಂಪುಟ ಸಭಾಂಗಣದ ಬದಲು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಮ್ಮೇಳನ ಸಭಾಂಗಣದಲ್ಲಿ ಸಂಪುಟ ಸಭೆಯನ್ನು ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ಸ್ವತಃ ಸಿಎಂ ಅವರೇ ತಿಳಿಸಿದರು.
ಇದೇ ವೇಳೆ ರಾಜ್ಯದಲ್ಲಿ ಕೋವಿಡ್-19 ರ ಪೂರಕ ಚಿಕಿತ್ಸೆಗೆ ಅಗತ್ಯವಿರುವ ಯಾವುದೇ ಔಷಧಿಗಳ ಕೊರತೆ ಇಲ್ಲ. ಕೋವಿಡ್-19 ಸೋಂಕು ಸಕಾರಾತ್ಮಕ ಎಂದು ದೃಢಪಟ್ಟವರೂ ಕೂಡಾ ಸಕಾಲಿಕ ಮತ್ತು ಸೂಕ್ತ ಚಿಕಿತ್ಸೆ ಪಡೆದ ನಂತರ ಶೇಕಡಾ 98 ರಷ್ಟು ಮಂದಿ ಬದುಕುಳಿದಿದ್ದಾರೆ. ಆದರೆ, ಜನಾರೋಗ್ಯವನ್ನು ಯಾರೂ ನಿರ್ಲಕ್ಷಿಸಬಾರದು. ಏಪ್ರಿಲ್ 14 ರವರೆಗೆ ಎಲ್ಲರೂ ಮನೆಯಲ್ಲೇ ಇದ್ದು ಈ ಸೋಂಕು ಹರಡದಂತೆ ಸರ್ಕಾರದೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.