ನವದೆಹಲಿ, ಮಾ 2 (Daijiworld News/MSP): 21 ದಿನಗಳ ಲಾಕ್ ಡೌನ್'ಗೂ ಮುಂಚೆ ಹೊರದೇಶಗಳಿಂದ ದೇಶಕ್ಕೆ ಆಗಮಿಸಿದ ಪ್ರಯಾಣಿಕರ ಮೇಲೆ ನಿಗಾವಹಿಸುವ ವ್ಯವಸ್ಥೆ ಮತ್ತಷ್ಟು ಬಲಪಡಿಸಬೇಕು ಎಂದು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಖಡಕ್ ಸೂಚನೆ ನೀಡಿದೆ.
ಕೊರೊನಾ ಸೋಂಕಿನ ಪರೀಕ್ಷೆಗೆ ಒಳಗಾದವರ ಸಂಖ್ಯೆ ಹಾಗೂ ವಿದೇಶದಿಂದ ಭಾರತಕ್ಕೆ ಆಗಮಿಸಿರುವ ಸಂಖ್ಯೆಯಲ್ಲಿ ಭಾರೀ ವ್ಯತ್ಯಾಸವಿರುವುದು ಕಂಡು ಬಂದ ಹಿನ್ನಲೆಯಲ್ಲಿ ಆತಂಕ ವ್ಯಕ್ತಪಡಿಸಿದ ಕೇಂದ್ರ ರಾಜ್ಯಗಳಿಗೆ ತೀವ್ರ ನಿಗಾ ವಹಿಸುವಂತೆ ಎಚ್ಚರಿಕೆ ನೀಡಿದೆ.
ಈ ವಿಚಾರವನ್ನು ಲಘುವಾಗಿ ಪರಿಗಣಿಸಿದ್ರೆ ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಭಾರೀ ದೊಡ್ಡ ಅನಾಹುತವೇ ಎದುರಾಗಲಿಗೆ ಎಂದು ಕಳವಳ ವ್ಯಕ್ತಪಡಿಸಿದೆ. ಮಾ.23ರವರೆಗೂ ವಿವಿಧ ರಾಷ್ಟ್ರಗಳಿಂದ ಭಾರತಕ್ಕೆ ಹಿಂತಿರುಗಿದ ಸುಮಾರು 15 ಲಕ್ಷಕ್ಕಿಂತ ಹೆಚ್ಚು ಮಂದಿಯನ್ನು ತಪಾಸಣೆ ಮಾಡಲಾಗಿದೆ ಎಂದು ದಾಖಲೆಗಳು ಹೇಳುತ್ತಿವೆ. ಆದರೆ, ವಿದೇಶದಿಂದ ಭಾರತಕ್ಕೆ ಬಂದವರ ಸಂಖ್ಯೆಗೂ, ಹೀಗೆ ತಪಾಸಣೆಗೊಳಗಾದವರ ಸಂಖ್ಯೆಯಲ್ಲಿ ಭಾರೀ ವ್ಯತ್ಯಾಸ ಕಾಣಿಸುತ್ತದೆ ಎಂದು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಕೇಂದ್ರ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ತಿಳಿಸಿದ್ದಾರೆ.
ನಿಗಾ ಹಾಗೂ ತಪಾಸಣೆಯನ್ನು ಮತ್ತಷ್ಟು ಕಠಿಣಗೊಳಿಸಿ ಯಾರಾದರೂ ತಪಾಸಣೆಯಿಂದ ಹೊರಗೆ ಉಳಿದಿರುವುದು ಕಂಡು ಬಂದರೆ ಅವರನ್ನು ತಕ್ಷಣ ಪತ್ತೆ ಮಾಡಬೇಕು. ಒಂದೇ ಒಂದು ಪ್ರಕರಣ ತಪಾಸಣೆಯಿಂದ ಹೊರಗುಳಿದದ್ದೂ ಕಂಡುಬಂದರೂ ಅದು ನಮ್ಮ ಪ್ರಯತ್ನವನ್ನು ಸಂಪೂರ್ಣ ವಿಫಲಗೊಳಿಸಬಹುದು ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.